ಪ್ರಶಸ್ತಿ ಸುತ್ತಿಗೆ ಕೃಷ್ಣ–ವಿಷ್ಣು ಪ್ಯಾರಿಸ್‌ (ಪಿಟಿಐ):ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ, ಭಾರತದ ಸೈನಾ ನೆಹ್ವಾಲ್ ಅವರು ಆರ್ಲಿಯನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಎಡವಿದರು. ಆದರೆ ಪುರುಷರ ಡಬಲ್ಸ್ ಜೋಡಿ ಭಾರತದ ಕೃಷ್ಣ ಪ್ರಸಾದ್‌ ಗರಗ ಹಾಗೂ ವಿಷ್ಣು ವರ್ಧನ ಗೌಡ ಪ‍ಂಜಾಲ ಫೈನಲ್‌ಗೆ ಲಗ್ಗೆಯಿಟ್ಟಿದ್ದು ಪ್ರಶಸ್ತಿಯ ನಿರೀಕ್ಷೆ ಮೂಡಿಸಿದ್ದಾರೆ. ಟೂರ್ನಿಯುದ್ದಕ್ಕೂ ಉತ್ತಮ ಆಟವಾಡಿದ್ದ ಸೈನಾ, ನಾಲ್ಕರ ಘಟ್ಟದ ಹಣಾಹಣಿಯಲ್ಲಿ 17-21, 17-21ರಿಂದ ಡೆನ್ಮಾರ್ಕ್‌ನ ಲಿನೆ ಕ್ರಿಸ್ಟೊಫರ್ಸನ್ ಅವರಿಗೆ ಮಣಿದರು. ಕೇವಲ 28 ನಿಮಿಷಗಳಲ್ಲಿ ಲಿನೆ, ಸೈನಾ ಅವರ ಸವಾಲನ್ನು ಮೀರಿದರು. ಸೆಮಿಫೈನಲ್‌ ಪಂದ್ಯದಲ್ಲಿ ಕೃಷ್ಣ ಹಾಗೂ ವಿಷ್ಣು 21–17, 21–17ರಿಂದ ಇಂಗ್ಲೆಂಡ್‌ನ ಕಾಲಮ್ ಹೆಮಿಂಗ್‌ ಹಾಗೂ ಸ್ಟೀವನ್‌ ಸ್ಟಾಲ್‌ವುಡ್ ಅವರನ್ನು ಪರಾಭವಗೊಳಿಸಿದರು. ಈ ಮೂಲಕ ಇದೇ ಮೊದಲ ಬಾರಿ ಸೂಪರ್ 100 ಟೂರ್ನಿಯೊಂದರ ಫೈನಲ್ ತಲುಪಿದ ಸಾಧನೆ ಮಾಡಿದರು. ಭಾರತದ ಆಟಗಾರರು ಫೈನಲ್ ಪಂದ್ಯದಲ್ಲಿ, ಇಂಡೊನೇಷ್ಯಾದ ಸಬರ್ ಕ್ಯಾರಿಮನ್‌ ಗುಟಾಮ–ಮೊಹ್ ರೆಜಾ ಪಹ್ಲೆವಿ ಇಸ್ಫಾಹನಿ ಹಾಗೂ ಇಂಗ್ಲೆಂಡ್‌ನ ಬೆನ್‌ ಲೇನ್‌– ಸೀಯಾನ್‌ ವೆಂಡಿ ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ. 21 ವರ್ಷದ ಕೃಷ್ಣ, ಜೂನಿಯರ್ ದಿನಗಳಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಜೊತೆಯಾಗಿ ಆಡುತ್ತಿದ್ದರು. ಸಾತ್ವಿಕ್‌ ಅವರಿಗೆ ಚಿರಾಗ್ ಶೆಟ್ಟಿ ಜೊತೆಗಾರನಾದ ಬಳಿಕ, 2016ರಿಂದ ಕೃಷ್ಣ ಅವರು ಧೃವ ಕಪಿಲ ಅವರೊಂದಿಗೆ ಕಣಕ್ಕಿಳಿಯತೊಡಗಿದರು. 2019ರಲ್ಲಿ ಈ ಜೋಡಿ ಬೇರ್ಪಟ್ಟಿತು. 20ರ ಹರಯದ ವಿಷ್ಣು, 2019ರ ಬಲ್ಗೇರಿಯನ್ ಜೂನಿಯರ್ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಇಶಾನ್ ಭಟ್ನಾಗರ್ ಜೊತೆಯಾಗಿ ಫೈನಲ್ ತಲುಪಿದ್ದರು. ಅಶ್ವಿನಿ–ಸಿಕ್ಕಿರೆಡ್ಡಿಗೆ ಸೋಲು: ಮಹಿಳಾ ಡಬಲ್ಸ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಹಾಗೂ ಎನ್‌.ಸಿಕ್ಕಿರೆಡ್ಡಿ ಕೂಡ ಸೆಮಿಫೈನಲ್‌ ಪಂದ್ಯದಲ್ಲಿ ಮುಗ್ಗರಿಸಿದರು. ಈ ಜೋಡಿಯು 18–21, 9–21ರಿಂದ ಅಗ್ರಶ್ರೇಯಾಂಕದ, ಥಾಯ್ಲೆಂಡ್ ಜೋಡಿ ಜಾಂಗಗಕೊಲ್ಪನ್‌ ಕಿತಿತಾರಕುಲ್‌–ರವಿಂದಾ ಪ್ರಜೊಂಗ್ಜಾಯ್ ವಿರುದ್ಧ ಸೋತಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.