ಶೂಟಿಂಗ್ ವಿಶ್ವಕಪ್: ಪುರುಷ, ಮಹಿಳೆಯರ ‘ಟ್ರ್ಯಾಪ್’ನಲ್ಲಿ ಚಿನ್ನ ನವದೆಹಲಿ: ಭಾರತದ ಶಾಟ್‌ಗನ್ ಶೂಟರ್‌ಗಳಾದ ಪೃಥ್ವಿರಾಜ್ ತೊಂಡೈಮನ್, ಲಕ್ಷ್ಯ ಶೆರಾನ್ ಮತ್ತು ಕೈನನ್ ಚೆನಾಯ್ ಅವರು ಭಾನುವಾರ ಮುಕ್ತಾಯಗೊಂಡ ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್‌ನ ಪುರುಷರ ಟ್ರ್ಯಾಪ್ ತಂಡ ವಿಭಾಗದಲ್ಲಿ ಚಿನ್ನ ಗೆದ್ದರು. ಮಹಿಳೆಯರ ಟ್ರ್ಯಾಪ್ ವಿಭಾಗದಲ್ಲೂ ಚಿನ್ನದ ಪದಕ ಭಾರತದ ಪಾಲಾಯಿತು. ವಿಶ್ವಕಪ್‌ನಲ್ಲಿ ಭಾರತ ಒಟ್ಟು 30 ಪದಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿತು. 15 ಚಿನ್ನ ಮತ್ತು ಒಂಬತ್ತು ಬಳ್ಳಿ ಪದಕಗಳು ಭಾರತದ ಪಾಲಾದವು. ಪುರುಷರ ವಿಭಾಗದ ಫೈನಲ್‌ನಲ್ಲಿ ಕಜಕಸ್ತಾನವನ್ನು ಭಾರತ ಮಣಿಸಿತು. ಆರಂಭದಲ್ಲಿ ಕಜಕಸ್ತಾನ 2–0ಯಿಂದ ಮುನ್ನಡೆದಿತ್ತು. ಚೇತರಿಸಿಕೊಂಡ ಭಾರತ 4–4ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ನಿರ್ಣಾಯಕ ಸುತ್ತಿನಲ್ಲಿ ಅಮೋಘ ಸಾಧನೆ ಮಾಡಿದ ಭಾರತ 6–4ರಲ್ಲಿ ಜಯ ಸಾಧಿಸಿತು. ಕಜಕಸ್ತಾನದ ವಿಕ್ಟರ್ ಖಸಿನೊವ್, ಮ್ಯಾಕ್ಸಿಮ್ ಕೊಲೊಮೊಯೆಟ್ಸ್ ಮತ್ತು ಆ್ಯಂಡ್ರೆ ಮೊಗಿಲೆವ್‌ಸ್ಕಿ ಕತಾರ್‌ನ ಮೊಹಮ್ಮದ್ ಅಲ್ ರುಮೈಯಿ, ಸಯೀದ್ ಅಬುಶರೀಬ್ ಮತ್ತು ನಾಸರ್ ಅಲಿ ಅಲ್‌ ಹೆಮೈದಿ ಅವರನ್ನು 6–4ರಲ್ಲಿ ಮಣಿಸಿ ಕಂಚಿನ ಪದಕ ಗೆದ್ದುಕೊಂಡರು. ಗುರುವಾರ ನಡೆದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಭಾರತ 494 ಸ್ಕೊರ್ ಗಳಿಸಿತ್ತು. ಕಜಕಸ್ತಾನ 489 ಸ್ಕೋರ್ ಮಾಡಿತ್ತು. ಮಹಿಳಾ ವಿಭಾಗದಲ್ಲಿ ಶ್ರೇಯಸಿ ಸಿಂಗ್, ರಾಜೇಶ್ವರಿ ಕುಮಾರಿ ಮತ್ತು ಮನೀಷಾ ಕೀರ್ ಕಜಕಸ್ತಾನದ ಸರ್ಸೆಂಕುಲ್ ರಿಸ್ಬೆಕೊವಾ, ಐಜಾನ್ ಡೊಸ್ಮನ್‌ಬೆಟೋವ ಮತ್ತು ಮರಿಯಾ ಮಿಟ್ರಿಯೆಂಕೊ ಅವರನ್ನು 6–0ಯಿಂದ ಮಣಿಸಿ ಚಿನ್ನದ ಪದಕ ಗೆದ್ದುಕೊಂಡರು. ಶ್ರೇಯಸಿ, ರಾಜೇಶ್ವರಿ ಮತ್ತು ಮನೀಷಾ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಾಂಪಿಯನ್‌ ಆಗಿದ್ದರು.ಶ್ರೇಯಸಿ ಮತ್ತು ಮನೀಷಾ ಫೈನಲ್‌ನಲ್ಲಿ ಅತ್ಯಮೋಘ ಸಾಮರ್ಥ್ಯ ತೋರಿದರು. ಒಂದೆರಡು ಬಾರಿ ಮಾತ್ರ ವಿಚಲಿತರಾಗಿದ್ದ ಅವರು ಉಳಿದಂತೆ ಎದುರಾಳಿಗಳನ್ನು ದಂಗುಬಡಿಸಿದರು. ಭಾರತ ಒಟ್ಟಾರೆ 321 ಸ್ಕೋರ್ ಗಳಿಸಿತ್ತು. ರ‍್ಯಾಪಿಡ್ ಫೈರ್ ಪಿಸ್ತೂಲ್‌ನಲ್ಲಿ ಬೆಳ್ಳಿ: ಪುರುಷರ 25 ಮೀಟರ್ಸ್ ರ‍್ಯಾಪಿಡ್ ಫೈರ್ ಪಿಸ್ತೂಲ್‌ ತಂಡ ವಿಭಾಗದಲ್ಲಿ ಭಾರತ ಬೆಳ್ಳಿ ಪದಕಕ್ಕೆ ಸಮಾಧಾನಪಟ್ಟುಕೊಂಡಿತ್ತು. ವಿಜಯವೀರ್ ಸಿಧು, ಗುರುಪ್ರೀತ್ ಸಿಂಗ್‌ ಮತ್ತು ಆದರ್ಶ್ ಸಿಂಗ್ ಫೈನಲ್‌ನಲ್ಲಿ ಅಮೆರಿಕದ ಕೇತ್ ಸ್ಯಾಂಡರ್ಸನ್‌, ಜ್ಯಾಕ್ ಹೊಬ್ಸನ್ ಮತ್ತು ಹೆನ್ರಿ ಟರ್ನರ್ ಭಾರತದ ವಿರುದ್ಧ 10–2ರಲ್ಲಿ ಜಯ ಸಾಧಿಸಿದರು. ಅರ್ಹತಾ ಸುತ್ತಿನ ಎರಡನೇ ಸ್ಪರ್ಧೆಯಲ್ಲಿ ಭಾರತದ ಶೂಟರ್‌ಗಳು 552 ಸ್ಕೋರ್ ಸಂಪಾದಿಸಿ ಎರಡನೇ ಸ್ಥಾನ ಗಳಿಸಿದ್ದರು. 571 ಸ್ಕೋರ್‌ಗಳೊಂದಿಗೆ ಅಮೆರಿಕ ಎರಡನೇ ಸ್ಥಾನ ಗಳಿಸಿತ್ತು. ಒಲಿಂಪಿಕ್ಸ್‌ಗೆ ತಂಡಗಳ ಆಯ್ಕೆ 3ರಂದು ಟೋಕಿಯೊ ಒಲಿಂಪಿಕ್ಸ್‌ಗೆ ಭಾರತ ತಂಡಗಳ ಆಯ್ಕೆ ಏಪ್ರಿಲ್ ಮೂರರಂದು ನಡೆಯಲಿದೆ ಎಂದು ಶೂಟಿಂಗ್ ಫೆಡರೇಷನ್ ಅಧ್ಯಕ್ಷ ರಣಿಂದರ್ ಸಿಂಗ್ ತಿಳಿಸಿದ್ದಾರೆ. ಕೋವಿಡ್‌–19ರ ಆತಂಕ ಇರುವುದರಿಂದ ಪ್ರತಿ ವಿಭಾಗದಲ್ಲೂ ಇಬ್ಬರು ಕಾಯ್ದಿರಿಸಿದ ಶೂಟರ್‌ಗಳನ್ನು ಆಯ್ಕೆ ಮಾಡಲಾಗುವುದು ಎಂದು ಅವರು ವಿವಿರಿಸಿದ್ದಾರೆ. ವಿಶ್ವಕಪ್‌ನಲ್ಲಿ 15 ಒಲಿಂಪಿಕ್ ಕೋಟಾಗಳನ್ನು ಗಳಿಸಲಾಗಿದೆಯಾದರೂ ಫೆಡರೇಷನ್‌ನ ಆಯ್ಕೆ ನೀತಿ ಪ್ರಕಾರ ಎಲ್ಲ ಟೂರ್ನಿಗಳು ಮತ್ತು ಆಯ್ಕೆ ಟ್ರಯಲ್ಸ್‌ಗಳಲ್ಲಿ ಗಳಿಸಿದ ಸ್ಕೋರ್‌ಗಳ ಆಧಾರದಲ್ಲಿ ಅಂತಿಮ ಆಯ್ಕೆ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.