ರಾಷ್ಟ್ರೀಯ ಟ್ರ್ಯಾಕ್ ಸೈಕ್ಲಿಂಗ್: ಪಾಯಲ್ ಚವಾಣ್‌ ಚಿನ್ನದ ಸ್ಪ್ರಿಂಟ್‌ ಬೆಂಗಳೂರು: ವಿಜಯಪುರ ಕ್ರೀಡಾನಿಲಯದ ಪಾಯಲ್ ಚವಾಣ್ ಅವರು ಹೈದರಾಬಾದ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಚಿನ್ನದ ನಗೆ ಬೀರಿದರು. 14 ವರ್ಷದೊಳಗಿನ ಸಬ್‌ ಜೂನಿಯರ್ ಬಾಲಕಿಯರ ಫ್ಲೈಯಿಂಗ್ ಸ್ಪ್ರಿಂಟ್ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದರು. 200 ಮೀಟರ್ಸ್ ದೂರವನ್ನು ಪಾಯಲ್ 15.42 ಸೆಕೆಂಡುಗಳಲ್ಲಿ ತಲುಪಿದರು. ಸಬ್ ಜೂನಿಯರ್ ಬಾಲಕರ ಫ್ಲೈಯಿಂಗ್ ಸ್ಪ್ರಿಂಟ್‌ನಲ್ಲಿ ಇದೇ ಕ್ರೀಡಾನಿಲಯದ ಸುಜಲ್ ಜಾಧವ್ ಕಂಚಿನ ಪದಕ ಗೆದ್ದುಕೊಂಡರು. 13.32 ಸೆಕೆಂಡುಗಳಲ್ಲಿ ಅವರು ಗುರಿ ಮುಟ್ಟಿದರು. ಎರಡು ಕಿಮೀ ವೈಯಕ್ತಿಕ ಪರ್ಸ್ಯೂಟ್‌ನಲ್ಲಿ ಅವರು ಕಂಚಿನ ಪದಕ ಗೆದ್ದುಕೊಂಡರು. ವಿಜಯಪುರದ ಅಂಕಿತಾ ರಾಥೋಡ್ 16 ವರ್ಷದೊಳಗಿನ ಸಬ್‌ಜೂನಿಯರ್ ಬಾಲಕಿಯರ ಎರಡು ಕಿಲೋಮೀಟರ್ಸ್‌ ವೈಯಕ್ತಿಕ ಪರ್ಸ್ಯೂಟ್‌ನಲ್ಲಿ (2:49.796 ನಿ) ಬೆಳ್ಳಿ ಗೆದ್ದರು. ಅಂಕಿತಾ 500 ಮೀ ಟೈಮ್ ಟ್ರಯಲ್‌ನಲ್ಲೂ (41.250 ಸೆ) ಕಂಚು ಗಳಿಸಿದರು.16 ವರ್ಷದೊಳಗಿನ ಸಬ್‌ಜೂನಿಯರ್ ಬಾಲಕರ ಎರಡು ಕಿಲೋಮೀಟರ್ಸ್‌ ವೈಯಕ್ತಿಕ ಪರ್ಸ್ಯೂಟ್‌ನಲ್ಲಿ ಜಮಖಂಡಿಯ ಮಲ್ಲಿಕಾರ್ಜುನ ಯಾದವಾಡ (2:30.230 ನಿ) ಕಂಚಿನ ಪದಕ ಗಳಿಸಿದರು. 500 ಮೀ ಟೈಮ್ ಟ್ರಯಲ್‌ನಲ್ಲೂ ಅವರು (36.218ಸೆ) ಕಂಚಿನ ಪದಕ ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.