ಎನ್‌ಐಎಸ್‌: 26 ಕ್ರೀಡಾಪಟುಗಳಿಗೆ ಕೋವಿಡ್‌–19 ನವದೆಹಲಿ: ಪಟಿಯಾಲದಲ್ಲಿರುವ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ (ಎನ್‌ಐಎಸ್‌) ತರಬೇತಿ ಪಡೆಯುತ್ತಿರುವ 26 ಕ್ರೀಡಾಪುಟಗಳು ಮತ್ತು ಕೆಲ ನೆರವು ಸಿಬ್ಬಂದಿಯಲ್ಲಿ ಕೋವಿಡ್–19 ಇರುವುದು ದೃಢಪಟ್ಟಿದೆ ಎಂದು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಪ್ರಕಟಣೆಯಲ್ಲಿ ತಿಳಿಸಿದೆ. ಎನ್‌ಐಎಸ್‌ನಲ್ಲಿ ವಿವಿಧ ವಿಭಾಗಗಳಲ್ಲಿ ತರಬೇತಿ ನಡೆಯುತ್ತಿದೆ. ಈ ಪೈಕಿ 380 ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದು ತಿಳಿಸಿರುವ ಸಾಯ್ ಸೋಂಕು ದೃಢಪಟ್ಟವರಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದವರು ಯಾರೂ ಇಲ್ಲ ಎಂದು ಸ್ಪಷ್ಟಪಡಿಸಿದೆ. ಪುರುಷರ ಬಾಕ್ಸಿಂಗ್ ತಂಡದ ಕೋಚ್ ಸಿ.ಎ.ಕುಟ್ಟಪ್ಪ ಮತ್ತು ಶಾಟ್‌ಪಟ್‌ ಕೋಚ್‌ ಮೊಹಿಂದರ್ ಸಿಂಗ್ ಧಿಲಾನ್, ಏಷ್ಯನ್ ಕೂಟದಲ್ಲಿ ಬೆಳ್ಳಿ ಗೆದ್ದ ಬಾಕ್ಸರ್‌ ದೀಪಕ್ ಕುಮಾರ್ ಮತ್ತು ರಾಷ್ಟ್ರೀಯ ಮುಕ್ತ ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದಿರುವ ಸಂಜೀತ್‌ ಸೋಂಕು ದೃಢಪಟ್ಟ ಪ್ರಮುಖರು. ಸೋಂಕು ಇರುವ ಎಲ್ಲರನ್ನೂ ಪ್ರತ್ಯೇಕವಾಸದಲ್ಲಿರಿಸಲಾಗಿದ್ದು ಇಡೀ ಕೇಂದ್ರವನ್ನು ಸ್ಯಾನಿಟೈಸ್ ಮಾಡಲಾಗಿದೆ. ಎನ್‌ಐಎಸ್‌ನಲ್ಲಿ ಸಾಮಾನ್ಯವಾಗಿ ಒಲಿಂಪಿಕ್ಸ್‌ಗೆ ಆಯ್ಕೆಯಾದ ಬಾಕ್ಸರ್‌ಗಳು, ಟ್ರ್ಯಾಕ್–ಫೀಲ್ಡ್ ಅಥ್ಲೀಟ್‌ಗಳು ಮತ್ತು ವೇಟ್‌ಲಿಫ್ಟರ್‌ಗಳಿಗೆ ತರಬೇತಿ ನೀಡಲಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.