ಸಾಯ್ ಕೇಂದ್ರದ ಕ್ರೀಡಾಪಟುಗಳಿಗೆ ಕೋವಿಡ್‌ ನವದೆಹಲಿ: ಭಾರತ ಕ್ರೀಡಾ ‍ಪ್ರಾಧಿಕಾರ (ಸಾಯ್‌) ಭೋಪಾಲ್ ಕೇಂದ್ರದಲ್ಲಿ 24 ಕ್ರೀಡಾಪಟುಗಳು ಸೇರಿದಂತೆ ಒಟ್ಟು 36 ಮಂದಿಗೆ ಬುಧವಾರ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರದ ಎಲ್ಲ ಕೇಂದ್ರಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ನೆರವು ಸಿಬ್ಬಂದಿ ಹಾಗೂ ಕ್ರೀಡಾಪಟುಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿರುವ ಯಾರೂ ಈ ಕೇಂದ್ರದಲ್ಲಿ ಇಲ್ಲ. ಏಪ್ರಿಲ್ ಮೂರು ಮತ್ತು ಆರರಂದು ನಡೆಸಿದ ಪರೀಕ್ಷೆಗಳಲ್ಲಿ ಪಾಸಿಟಿವ್ ವರದಿ ಬಂದಿದೆ. ಸುರಕ್ಷತೆಯ ದೃಷ್ಟಿಯಿಂದ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಾಯ್ ತಿಳಿಸಿದೆ. ಕೋವಿಡ್ ನಿಯಮಾವಳಿಗಳನ್ನು ಚಾಚೂ ತಪ್ಪದೆ ಪಾಲಿಸಲು ಆದೇಶಿಸಿರುವ ಸಾಯ್ ಪ್ರತಿ ವಾರ ಕ್ರೀಡಾಪಟುಗಳು ಮತ್ತು ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.