ಕೋವಿಡ್‌–19: ಬ್ಯಾಡ್ಮಿಂಟನ್ ಟೂರ್ನಿಗಳು ರದ್ದು ನವದೆಹಲಿ: ರಷ್ಯನ್ ಓಪನ್ ಹಾಗೂ ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಗಳನ್ನು ಕೋವಿಡ್‌–19 ಪಿಡುಗಿನ ನಿರ್ಬಂಧಗಳ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ. ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್‌ (ಬಿಡಬ್ಲ್ಯುಎಫ್‌) ಸೋಮವಾರ ಈ ವಿಷಯ ತಿಳಿಸಿದೆ. ‘ಕೋವಿಡ್‌ಗೆ ಸಂಬಂಧಿಸಿ ವಿಧಿಸಿರುವ ನಿರ್ಬಂಧಗಳ ಕಾರಣ ಸ್ಥಳೀಯ ಸಂಘಟಕರು ಟೂರ್ನಿಯನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಕುರಿತು ರಷ್ಯಾ ಹಾಗೂ ಇಂಡೊನೇಷ್ಯಾ ಸಂಸ್ಥೆಗಳು ನಮ್ಮ ಫೆಡರೇಷನ್‌ನೊಂದಿಗೆ ಚರ್ಚಿಸಿವೆ‘ ಎಂದು ಬಿಡಬ್ಲ್ಯುಎಫ್ ಹೇಳಿದೆ. ರಷ್ಯಾ ಓಪನ್ ಟೂರ್ನಿಯು ಜುಲೈ 20ರಿಂದ 25ರವರೆಗೆ ವ್ಲಾಡಿವೊಸ್ತೊಕ್‌ನಲ್ಲಿ ನಿಗದಿಯಾಗಿತ್ತು. ಇಂಡೊನೇಷ್ಯಾ ಮಾಸ್ಟರ್ಸ್ ಅಕ್ಟೋಬರ್‌ 5ರಿಂದ 10ರವರೆಗೆ ನಡೆಯಬೇಕಿತ್ತು. ಜೂನ್‌ನಲ್ಲಿ ನಡೆಯಬೇಕಿದ್ದ ಕೆನಡಾ ಓಪನ್ ಟೂರ್ನಿಯನ್ನೂ ರದ್ದುಗೊಳಿಸಲಾಗಿದೆ. ಆಗಸ್ಟ್‌ನಲ್ಲಿ ನಡೆಯಬೇಕಿರುವ ಹೈದರಾಬಾದ್ ಓಪನ್ ಟೂರ್ನಿಯ ಕುರಿತು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.