ಹಾಕಿ: ಭಾರತದೊಂದಿಗೆ ದ್ವಿಪಕ್ಷೀಯ ಸರಣಿಗೆ ಪಾಕ್ ಉತ್ಸುಕ ಕರಾಚಿ: ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಪಾಕಿಸ್ತಾನ ಹಾಕಿ ಫೆಡರೇಷನ್ (ಪಿಎಚ್‌ಎಫ್‌) ಭಾರತದೊಂದಿಗೆ ದ್ವಿಪಕ್ಷೀಯ ಸರಣಿಯನ್ನು ಆಡಲು ಉತ್ಸುಕತೆ ತೋರಿದೆ. ಮುಂದಿನ ತಿಂಗಳು ನವದೆಹಲಿಯಲ್ಲಿ ನಡೆಯಲಿರುವ 47ನೇ ಅಂತರರಾಷ್ಟ್ರೀಯ ಹಾಕಿ ಫಡೆರೇಷನ್‌ನ (ಎಫ್‌ಐಎಚ್‌) ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲು ನಿರ್ಧರಿಸಿದೆ. ಉಭಯ ದೇಶಗಳ ತಂಡಗಳ ನಡುವಣ ಪಂದ್ಯಗಳನ್ನು ತಟಸ್ಥ ತಾಣಗಳಲ್ಲಿ ಆಯೋಜಿಸುವ ಕುರಿತು ಮೇ 19ರಿಂದ 23ರವರೆಗೆ ನಡೆಯುವ ಸಭೆಯಲ್ಲಿ ಪ್ರಸ್ತಾಪಿಸಲು ಪಾಕ್ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ‘ಮುಂದಿನ ನಾಲ್ಕು ವರ್ಷಗಳಿಗೆ ಎಫ್‌ಐಎಚ್ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರನ್ನು ಆಯ್ಕೆ ಮಾಡಲಾಗುವುದರಿಂದ ಇದು ಮಹತ್ವದ ಸಭೆಯಾಗಿದೆ.ಪಾಕಿಸ್ತಾನ ಮತ್ತು ಭಾರತ ಅಲ್ಲದೆ ಎರಡೂ ದೇಶಗಳಲ್ಲಿನ ಹಾಕಿ ಅಭಿಮಾನಿಗಳಿಗೆ ಅನುಕೂಲವಾಗುವಂತಹ ದ್ವಿಪಕ್ಷೀಯ ಪಂದ್ಯಗಳನ್ನು ಪುನರಾರಂಭಿಸುವ ಸಾಧ್ಯತೆಯ ಬಗ್ಗೆ ಭಾರತೀಯ ಹಾಕಿ ಫೆಡರೇಷನ್‌ ಅಧಿಕಾರಿಗಳೊಂದಿಗೆ ಮಾತನಾಡಲು ಈ ಸಭೆ ನಮಗೆ ಅವಕಾಶ ನೀಡಲಿದೆ‘ ಎಂದು ಪಿಎಚ್‌ಎಫ್‌ನ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಿಎಚ್‌ಎಫ್ ಅಧ್ಯಕ್ಷ ಖಾಲಿದ್ ಸಾಜದ್‌ ಖೋಖರ್ ಮತ್ತು ಕಾರ್ಯದರ್ಶಿ ಆಸಿಫ್ ಬಜ್ವಾ ಅವರು ಸಭೆಗೆ ಆಗಮಿಸಲು ತಯಾರಿ ನಡೆಸಿದ್ದು, ವೀಸಾಗಳಿಗಾಗಿಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಒಂದು ದಶಕದಿಂದ ಪಾಕಿಸ್ತಾನ ಮತ್ತು ಭಾರತ ಯಾವುದೇ ದ್ವಿಪಕ್ಷೀಯ ಹಾಕಿ ಪಂದ್ಯಗಳನ್ನು ಆಡಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.