ಅರ್ಜೆಂಟೀನಾ ಮಣಿಸಿದ ಭಾರತ ಬ್ಯೂನಸ್‌ ಐರಿಸ್‌, ಅರ್ಜೆಂಟೀನಾ: ಭಾರತ ಹಾಕಿ ತಂಡವು ಅರ್ಜೆಂಟೀನಾ ಪ್ರವಾಸದಲ್ಲಿ ಶುಭಾರಂಭ ಮಾಡಿದೆ. ಇಲ್ಲಿ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತ 4–3ರಿಂದ ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾವನ್ನು ಪರಾಭವಗೊಳಿಸಿತು. ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತ ತಂಡದ ಪರ ನೀಲಕಂಠ ಶರ್ಮಾ (16ನೇ ನಿಮಿಷ), ಹರ್ಮನ್‌ಪ್ರೀತ್ ಸಿಂಗ್‌ (28ನೇ ನಿಮಿಷ), ರೂಪಿಂದರ್ ಪಾಲ್ ಸಿಂಗ್‌ (33ನೇ ನಿಮಿಷ) ಹಾಗೂ ವರುಣ್ ಕುಮಾರ್‌ (47ನೇ ನಿಮಿಷ) ಕೈಚಳಕ ತೋರಿದರು. ಅರ್ಜೆಂಟೀನಾ ತಂಡದ ಡ್ರ್ಯಾಕ್‌ಫ್ಲಿಕರ್‌ ಲಿಯಾಂಡ್ರೊ ಟೋಲಿನಿ (32, 53ನೇ ನಿಮಿಷ) ಎರಡು ಗೋಲು ದಾಖಲಿಸಿದರೆ, ಮೈಕೊ ಕ್ಯಾಸೆಲ್ಲಾ (41ನೇ ನಿಮಿಷ) ಒಂದು ಬಾರಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು. ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳು ನಿಧಾನಗತಿಯ ಆಟಕ್ಕೆ ಮೊರೆಹೋದವು. ಎರಡನೇ ಕ್ವಾರ್ಟರ್‌ನಲ್ಲಿ ಶೀಲಾನಂದ ಲಾಕ್ರಾ ನೀಡಿದ ನೆರವಿನಲ್ಲಿ ಗೋಲು ಗಳಿಸಿದ ನೀಲಕಂಠ ಶರ್ಮಾ ತಂಡದ ಮುನ್ನಡೆಗೆ ಕಾರಣರಾದರು. ಅಲ್ಲಿಂದ ಆಟ ರಂಗೇರಿತು. ಆತಿಥೇಯ ತಂಡಕ್ಕೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವೊಂದನ್ನು ಭಾರತದ ಗೋಲ್‌ಕೀಪರ್ ಪಿ.ಆರ್‌. ಶ್ರೀಜೇಶ್ ಹಾಳುಗೆಡವಿದರು. ನಂತರ ಪೆನಾಲ್ಟಿ ಕಾರ್ನರ್‌ನಲ್ಲಿ ಯಶಸ್ಸು ಕಂಡ ಹರ್ಮನ್‌ಪ್ರೀತ್‌, ತಂಡದ ಮುನ್ನಡೆಯನ್ನು 2–0ಕ್ಕೆ ಹೆಚ್ಚಿಸಿದರು. ಮೂರನೇ ಕ್ವಾರ್ಟರ್‌ನಲ್ಲಿ ಅರ್ಜೆಂಟೀನಾ ತಿರುಗೇಟು ನೀಡಿತು. ಲಿಯಾಂಡ್ರೊ ಟೋಲಿನಿ ಗೋಲು ಗಳಿಸಿ ತಂಡದ ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿದರು. ಅದಾದ ನಿಮಿಷದ ಬಳಿಕ ಸೆಟ್‌ ಪೀಸ್‌ನಲ್ಲಿ ಸಿಕ್ಕ ಅವಕಾಶವನ್ನು ರೂಪಿಂದರ್ ಪಾಲ್ ಗೋಲಾಗಿಸಿದಾಗ ಭಾರತದ ಮುನ್ನಡೆ 3–1ಕ್ಕೆ ಹೆಚ್ಚಿತು. ಮೈಕೊ ಕ್ಯಾಸೆಲ್ಲಾ ಅರ್ಜೆಂಟೀನಾ ತಂಡದ ಎರಡನೇ ಗೋಲು ದಾಖಲಿಸಿದರು. ಮತ್ತೊಂದು ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ವರುಣ್ ಕುಮಾರ್ ಗೋಲಾಗಿ ಪರಿವರ್ತಿಸಿ ಪ್ರವಾಸಿ ತಂಡದ ಜಯವನ್ನು ಬಹುತೇಕ ಖಚಿತಪಡಿಸಿದರು. 53ನೇ ನಿಮಿಷದಲ್ಲಿ ಮತ್ತೊಮ್ಮೆ ಟೋಲಿನಿ ಮಿಂಚಿದರು. ಆತಿಥೇಯ ತಂಡದ ಹಿನ್ನಡೆಯನ್ನು 3–4ಕ್ಕೆ ಇಳಿಸುವಲ್ಲಿ ಮಾತ್ರ ಯಶಸ್ವಿಯಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.