2024: ಲಖನೌ ವಿರುದ್ಧ ಕೆಕೆಆರ್‌ಗೆ 8 ವಿಕೆಟ್‌ಗಳ ಭರ್ಜರಿ ಜಯ ಕೋಲ್ಕತ್ತ: ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಲಖನೌ ಸೂಪರ್‌ಜೈಂಟ್ಸ್ ತಂಡವು 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಅಬ್ಬರದ ಬ್ಯಾಟಿಂಗ್ ಮಾಡಿದ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ 47 ಎಸೆತಗಳಲ್ಲಿ ಅಜೇಯ 89 ರನ್ ಸಿಡಿಸುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಇದರಲ್ಲಿ 3 ಸಿಕ್ಸರ್ ಮತ್ತು 14 ಬೌಂಡರಿಗಳಿದ್ದವು. ನಾಯಕ ಶ್ರೇಯಸ್ ಅಯ್ಯರ್ ಅಜೇಯ 38 ರನ್ ಸಿಡಿಸಿ ಉತ್ತಮ ಸಾಥ್ ನೀಡಿದರು. ಲಖನೌ ನೀಡಿದ್ದ ಸಾಧಾರಣ ಮೊತ್ತದ ಗುರಿಯನ್ನು ನಿರಾಯಾಸವಾಗಿ ತಲುಪಿದ ಕೋಲ್ಕತ್ತ ಬ್ಯಾಟರ್‌ಗಳು ಯಾವುದೇ ಹಂತಕ್ಕೆ ಲಖನೌ ಬೌಲರ್‌ಗಳು ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ. 16.4 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ತಂಡ ಗೆಲುವಿನ ಗುರಿ ತಲುಪಿತು. 161 ರನ್‌ ಗಳಿಸಿದ್ದ ಲಖನೌ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಲಖನೌ ಬ್ಯಾಟರ್‌ಗಳು ಆರಂಭದಿಂದಲೂ ರನ್ ಗಳಿಸಲು ಪರದಾಡಿದರು. ಕ್ವಿಂಟನ್ ಡಿಕಾಕ್ 10 ರನ್ ಗಳಿಸಿದರೆ, ದೀಪಕ್ ಹೂಡಾ 8 ರನ್‌ಗೆ ಪೆವಿಲಿಯನ್ ಸೇರಿಕೊಂಡರು. ಒಂದೆಡೆ, ವಿಕೆಟ್ ಉರುಳುತ್ತಿದ್ದರೂ ಉತ್ತಮವಾಗಿ ಬ್ಯಾಟ್ ಬೀಸಿದ ನಾಯಕ ಕೆ.ಎಲ್. ರಾಹುಲ್ 39 ರನ್ ಸಿಡಿಸಿದರು. ಬಳಿಕ, ಆಯುಶ್ ಬದೋನಿ 29 ಮತ್ತು ನಿಕೊಲಸ್ ಪೂರನ್ 45 ರನ್ ಸಿಡಿಸುವ ಮೂಲಕ ತಂಡದ ಉತ್ತಮ ಮೊತ್ತಕ್ಕೆ ನೆರವಾದರು. ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದ ವೇಗಿ ಮಿಚೆಲ್ ಸ್ಟಾರ್ಕ್ 28 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ, ವೈಭವ್ ಅರೋರಾ, ಸುನಿಲ್ ನಾರಾಯಣ್, ವರುಣ್ ಚಕ್ರವರ್ತಿ ಮತ್ತು ರಸೇಲ್ ತಲಾ 1 ವಿಕೆಟ್ ಪಡೆದರು. ಅಂಕಪಟ್ಟಿಯಲ್ಲಿ ಕೆಕೆಆರ್ 2ನೇ ಸ್ಥಾನದಲ್ಲಿದ್ದು, ಡೆಲ್ಲಿ ಎಲ್‌ಎಸ್‌ಜಿ 4ನೇ ಸ್ಥಾನದಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.