2024: ಪಂಜಾಬ್‌ಗೆ 193 ರನ್ ಗುರಿ ನೀಡಿದ ಮುಂಬೈ ಮೊಹಾಲಿ: ಇಲ್ಲಿ ನಡೆಯುತ್ತಿರುವ ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 192 ರನ್ ಕಲೆ ಹಾಕಿದೆ. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ತಂಡ ಸೂರ್ಯಕುಮಾರ್ ಯಾದವ್ ಅವರು 53 ಎಸೆತಗಳಲ್ಲಿ ಸಿಡಿಸಿದ 76 ರನ್ ನೆರವಿನಿಂದ ಸ್ಪರ್ಧಾತ್ಮಕ ಮೊತ್ತಕ್ಕೆ ಕಲೆ ಹಾಕಿತು. ಅವರ ಈ ಸ್ಫೋಟಕ ಬ್ಯಾಟಿಂಗ್‌ನಲ್ಲಿ 7 ಬೌಂಡರಿ, 3 ಸಿಕ್ಸರ್‌ಗಳಿದ್ದವು. ಉಳಿದಂತೆ ರೋಹಿತ್ ಶರ್ಮಾ 36, ತಿಲಕ್ ವರ್ಮಾ 34 ರನ್ ಸಿಡಿಸಿದರು. ಅಂತಿಮ ಓವರ್‌ನಲ್ಲಿ 3 ವಿಕೆಟ್ ಉರುಳಿಸಿದ ಹರ್ಷಲ್ ಪಟೇಲ್ ಮುಂಬೈ ತಂಡ 200ರ ಗಡಿ ದಾಟುವುದನ್ನು ತಡೆದರು. ಹರ್ಷಲ್ ಪಟೇಲ್ 31 ರನ್‌ಗೆ 3 ವಿಕೆಟ್ ಉರುಳಿಸಿದರು. ಸ್ಯಾಮ್ ಕರನ್ 2 ವಿಕೆಟ್ ಪಡೆದರು. ಅಂಕಪಟ್ಟಿಯಲ್ಲಿ ಉಭಯ ತಂಡಗಳು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ‘ಸಮಬಲ’ ಸಾಧಿಸಿವೆ. ತಲಾ ಆರು ಪಂದ್ಯಗಳನ್ನಾಡಿ ಎರಡರಲ್ಲಿ ಜಯಿಸಿ, ನಾಲ್ಕರಲ್ಲಿ ಸೋತಿವೆ. ನೆಟ್‌ ರನ್‌ರೇಟ್‌ನಲ್ಲಿ ತುಸು ಉತ್ತಮವಾಗಿರುವುದರಿಂದ ಪಂಜಾಬ್ (-0.218) ಏಳನೇ ಸ್ಥಾನದಲ್ಲಿದೆ. ಮುಂಬೈ (-0.234) ಅದರ ನಂತರದ ಸ್ದಾನದಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.