ಮಹಾರಾಜ ಟ್ರೋಫಿ ಕ್ರಿಕೆಟ್ ಸೆಮಿಫೈನಲ್: ಲವೀಶ್‌ ಉತ್ತಮ ದಾಳಿ ಬೆಂಗಳೂರು: ಲವೀಶ್ ಕೌಶಲ್ ಮತ್ತು ಮೊಹಸೀನ್ ಖಾನ್ ಅವರ ಪರಿಣಾಮಕಾರಿ ದಾಳಿಯಿಂದಾಗಿ ಗುಲ್ಬರ್ಗ ಮಿಸ್ಟಿಕ್ಸ್ ತಂಡವು ಶುಕ್ರವಾರ ಇಲ್ಲಿ ನಡೆದ ಮಹಾರಾಜ ಟ್ರೋಫಿ ಸೆಮಿಫೈನಲ್‌ನಲ್ಲಿ ಸಾಧಾರಣಮೊತ್ತ ಗಳಿಸಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಬೌಲರ್‌ಗಳು ವಿಜೃಂಭಿಸಿದರು. ಇದರಿಂದಾಗಿ ಗುಲ್ಬರ್ಗ ತಂಡವು 19.5 ಓವರ್‌ಗಳಲ್ಲಿ 155 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ ಲವನೀತ್ ಸಿಸೊಡಿಯಾ (41; 20ಎ) ಮತ್ತು ಪ್ರವೀಣ ದುಬೆ (26; 17ಎ) ಅವರಿಬ್ಬರನ್ನು ಬಿಟ್ಟರೆ ಉಳಿದ ಬ್ಯಾಟರ್‌ಗಳು ಹೆಚ್ಚು ರನ್ ಗಳಿಸಲಿಲ್ಲ. ಲವನೀತ್ 5 ಬೌಂಡರಿ ಮತ್ತು 2 ಸಿಕ್ಸರ್ ಹೊಡೆದರು. ದುಬೆ 2 ಸಿಕ್ಸರ್ ಮತ್ತು 1 ಬೌಂಡರಿ ಗಳಿಸಿದರು. ಬೆಂಗಳೂರು ತಂಡದ ಲವೀಶ್, ಖಾನ್, ಕ್ರಾಂತಿಕುಮಾರ್ ಮತ್ತು ಶುಭಾಂಗ್ ಅವರು ತಲಾ ಎರಡು ವಿಕೆಟ್ ಗಳಿಸಿದರು. ಗುಲ್ಬರ್ಗ ತಂಡವು 81 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಸಂಕ್ಷಿಪ್ತ ಸ್ಕೋರು: ಗುಲ್ಬರ್ಗ ಮಿಸ್ಟಿಕ್ಸ್: 19.5 ಓವರ್‌ಗಳಲ್ಲಿ 155 (ಲವನೀತ್ ಸಿಸೊಡಿಯಾ 41, ಪ್ರವೀಣ ದುಬೆ 26, ದೇವದತ್ತ ಪಡಿಕ್ಕಲ್ 13, ಮೊಹಸೀನ್ ಖಾನ್ 25ಕ್ಕೆ2, ಲವೀಶ್ ಕೌಶಲ್ 25ಕ್ಕೆ2, ಕ್ರಾಂತಿಕುಮಾರ್ 22ಕ್ಕೆ2, ಶುಭಾಂಗ್ ಹೆಗಡೆ 23ಕ್ಕೆ2) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.