ಸೆಮಿ ಪ್ರವೇಶಿಸಿದ ಅಫ್ಗಾನಿಸ್ತಾನ: ರಶೀದ್ ಖಾನ್ ಪಡೆಯ ಚಾರಿತ್ರಿಕ ಸಾಧನೆ ಕಿಂಗ್ಸ್‌ಟೌನ್: ರಶೀದ್ ಖಾನ್ ಅವರ ದಿಟ್ಟ ನಾಯಕತ್ವದಲ್ಲಿ ಅಫ್ಗಾನಿಸ್ತಾನ ತಂಡವು ಮೊಟ್ಟಮೊದಲ ಬಾರಿಗೆ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕಿತು. ಯುದ್ಧ, ಭಯೋತ್ಪಾದನೆ ಮತ್ತು ರಾಜಕೀಯ ದಳ್ಳುರಿಯಲ್ಲಿ ಬೆಂದು ಬಸವಳಿದ ದೇಶದಲ್ಲಿ ಸಂತಸದ ಹೊನಲು ಹರಿಸಿದ ರಶೀದ್ ಬಳಗವು ಚಾರಿತ್ರಿಕ ಸಾಧನೆ ಮಾಡಿತು. ಈ ಹಾದಿಯಲ್ಲಿ ತಂಡವು ಸೂಪರ್ 8ರ ಹಂತದ ಎರಡನೇ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಮಂಗಳವಾರ ಬೆಳಿಗ್ಗೆ (ಭಾರತೀಯ ಕಾಲಮಾನ) ನಡೆದ 8ರ ಘಟ್ಟದ ಕೊನೆ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 8 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ 2021ರ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ಸೆಮಿಫೈನಲ್ ಆಸೆಯು ಭಗ್ನವಾಯಿತು. ಜೂನ್ 27ರಂದು ನಡೆಯುವ ಸೆಮಿಫೈನಲ್‌ನಲ್ಲಿ ಅಫ್ಗಾನಿಸ್ತಾನವು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. 'ಇದೊಂದು ಬೃಹತ್ ಸಾಧನೆ. ಈ ಕುರಿತು ಮಾತನಾಡಲು ನನಗೆ ಪದಗಳೇ ಸಿಗುತ್ತಿಲ್ಲ. ತವರು ದೇಶದಲ್ಲಿ ಸಂಭ್ರಮ ಹೊನಲಾಗಿದೆ’ ಎಂದು ಪಂದ್ಯದ ನಂತರ ರಶೀದ್ ಹೇಳಿದರು. ಬಾಂಗ್ಲಾ ಎದುರಿನ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಗಾನಿಸ್ತಾನ ಬ್ಯಾಟಿಂಗ್ ಮಾಡಿತು. ಪಿಚ್‌ನಲ್ಲಿದ್ದ ಸತ್ವವನ್ನು ಬಳಸಿಕೊಂಡ ಬಾಂಗ್ಲಾ ಬೌಲರ್‌ಗಳ ಎದುರು ರಶೀದ್ ಬಳಗವು 5 ವಿಕೆಟ್‌ಗಳಿಗೆ 115 ರನ್ ಗಳಿಸಿತು. ಬಾಂಗ್ಲಾ ಬೌಲರ್‌ಗಳು ಒಟ್ಟು 66 ಡಾಟ್ ಬಾಲ್ ಪ್ರಯೋಗಿಸಿದರು. ಲೆಗ್‌ಸ್ಪಿನ್ನರ್ ರಿಷದ್ ಹುಸೇನ್ (26ಕ್ಕೆ3) ಪರಿಣಾಮಕಾರಿ ದಾಳಿ ನಡೆಸಿದರು. ಅಫ್ಗಾನಿಸ್ತಾನ ತಂಡದ ಆರಂಭಿಕ ಬ್ಯಾಟರ್ ರೆಹಮಾನುಲ್ಲಾ ಗುರ್ಬಾಜ್ (43; 55ಎ) ಬಲ ತುಂಬಿದರು. ಆದರೆ ಆಗಾಗ ಮಳೆ ಸುರಿದ ಕಾರಣ ಡಕ್ವರ್ಥ್ ಲೂಯಿಸ್ ನಿಯಮ ಅನ್ವಯಿಸಲಾಯಿತು. 19 ಓವರ್‌ಗಳಲ್ಲಿ 114 ರನ್‌ಗಳನ್ನು ಗಳಿಸುವ ಗುರಿಯನ್ನು ಬಾಂಗ್ಲಾ ತಂಡಕ್ಕೆ ನಿಗದಿಪಡಿಸಲಾಯಿತು. ತಂಡವು 3 ವಿಕೆಟ್‌ಗಳಿಗೆ 31 ರನ್‌ ಗಳಿಸಿದ್ದಾಗ ಮಳೆ ಸುರಿಯಿತು. 2017ರಲ್ಲಿ ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಸದಸ್ಯತ್ವ ಪಡೆದ ಅಫ್ಗನ್ ತಂಡದ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪಣಕ್ಕಿಟ್ಟಿತು. ಸ್ಪಿನ್ನರ್ ರಶೀದ್ (23ಕ್ಕೆ4) ಮತ್ತು ವೇಗಿ ನವೀನ್ ಉಲ್ ಹಕ್ (26ಕ್ಕೆ4) ಅವರು ತಂಡದ ಗೆಲುವಿಗೆ ಕಾರಣರಾದರು. ಬಾಂಗ್ಲಾ 17.5 ಓವರ್‌ಗಳಲ್ಲಿ 105 ರನ್‌ ಗಳಿಸಿ ಪರಾಭವಗೊಂಡಿತು. ಲಿಟನ್ ದಾಸ್ (ಔಟಾಗದೆ 54) ಅವರ ಛಲದ ಆಟಕ್ಕೆ ತಕ್ಕ ಫಲಿತಾಂಶ ದಕ್ಕಲಿಲ್ಲ. ಸೋಮವಾರದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 24 ರನ್‌ಗಳಿಂದ ಭಾರತವು ಸೋಲಿಸಿತ್ತು. ಇದರಿಂದಾಗಿ ಅಫ್ಗನ್ ತಂಡದ ಸೆಮಿಫೈನಲ್ ಪ್ರವೇಶದ ಅವಕಾಶ ಉಳಿದಿತ್ತು. ಅದನ್ನು ಸಮರ್ಥವಾಗಿ ಬಳಸಿಕೊಂಡಿತು. ಯುದ್ಧಪೀಡಿತ ಅಫ್ಗಾನಿಸ್ತಾನದ ಕ್ರಿಕೆಟ್‌ ಪುನರುತ್ಥಾನಕ್ಕೆ ಭಾರತದ ಕೊಡುಗೆಯೂ ಪ್ರಮುಖವಾಗಿದೆ. ಅಫ್ಗನ್ ತಂಡಕ್ಕೆ ಭಾರತವೇ ’ತವರು ತಾಣ’ ಆಗಿದೆ. ಸಂಕ್ಷಿಪ್ತ ಸ್ಕೋರು: ಅಫ್ಗಾನಿಸ್ತಾನ: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 115 (ರೆಹಮಾನುಲ್ಲಾ ಗುರ್ಬಾಜ್ 43, ಇಬ್ರಾಹಿಂ ಝದ್ರಾನ್ 18, ರಶೀದ್ ಖಾನ್ ಔಟಾಗದೆ 19, ರಿಷದ್ ಹುಸೇನ್ 26ಕ್ಕೆ3, ತಸ್ಕಿನ್ ಅಹಮದ್ 12ಕ್ಕೆ1) ಬಾಂಗ್ಲಾದೇಶ: 17.5 ಓವರ್‌ಗಳಲ್ಲಿ 105 (ಲಿಟನ್ ದಾಸ್ ಔಟಾಗದೆ 54, ತೌಹಿದ್ ಹೃದಯ್ 14, ನವೀನ್ ಉಲ್ ಹಕ್ 26ಕ್ಕೆ4, ರಶೀದ್ ಖಾನ್ 23ಕ್ಕೆ4) ಫಲಿತಾಂಶ: ಅಫ್ಗಾನಿಸ್ತಾನ ತಂಡಕ್ಕೆ 8 ರನ್ ಜಯ (ಮಳೆಯಿಂದಾಗಿ ಡಿಎಲ್ಎಸ್ ನಿಯಮ ಅನ್ವಯ. 19 ಓವರ್‌ಗಳಲ್ಲಿ 114 ರನ್‌ಗಳ ಗುರಿ). ಪಂದ್ಯಶ್ರೇಷ್ಠ: ನವೀನ್ ಉಲ್ ಹಕ್. ಲಾರಾ ಮಾತುಗಳಿಂದ ಸ್ಫೂರ್ತಿ: ಖಾನ್‌ ಅರ್ನಾಸ್‌ ವೇಲ್ (ಸೇಂಟ್‌ ವಿನ್ಸೆಂಟ್‌): ಟಿ20 ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಅಫ್ತಾನಿಸ್ತಾನ ತಂಡ ಮೊದಲ ಬಾರಿ ಸೆಮಿಫೈನಲ್‌ ತಲುಪುವಲ್ಲಿ ಕ್ರಿಕೆಟ್ ದಂತಕಥೆ ಬ್ರಯಾನ್‌ ಲಾರಾ ಅವರೇ ಸ್ಫೂರ್ತಿ ಎಂದು ಆ ತಂಡದ ನಾಯಕ ರಶೀದ್ ಖಾನ್ ಹೇಳಿದ್ದಾರೆ. ಒಂದನೇ ಗುಂಪಿನ ರೋಚಕ ಹಣಾಹಣಿಯಲ್ಲಿ ಬಾಂಗ್ಲಾದೇಶದ ಮೇಲೆ ಜಯ ಪಡೆದ ಅಫ್ಗಾನಿಸ್ತಾನ ನಾಲ್ಕರ ಘಟ್ಟ ತಲುಪಿದೆ. ರಶೀದ್ ಖಾನ್ ಬಳಗದ ಗೆಲುವಿನಿಂದಾಗಿ ಆಸ್ಟ್ರೇಲಿಯಾ ಹೊರಬಿದ್ದಿದೆ. ‘ಅಫ್ಗಾನಿಸ್ತಾನ ಸೆಮಿಫೈನಲ್ ತಲುಪಲಿದೆ ಎಂದು ಲಾರಾ ಅವರು ಹಿಂದೆಯೇ ಹೇಳಿದ್ದರು’ ಎಂದು ರಶೀದ್ ನೆನಪಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.