ಮಹಾರಾಜ ಟ್ರೋಫಿ ಅನಾವರಣ | ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಲ್ಲ ಪಂದ್ಯಗಳು ಬೆಂಗಳೂರು: ಇದೇ ಆಗಸ್ಟ್‌ 15ರಿಂದ ಆರಂಭವಾಗಲಿರುವ ಮೂರನೇ ಆವೃತ್ತಿಯ ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಲ್ಲ ಪಂದ್ಯಗಳೂ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಶುಕ್ರವಾರ ಸಂಜೆ ನಡೆದ ಟ್ರೋಫಿ ಅನಾವರಣ ಕಾರ್ಯಕ್ರಮ ಮತ್ತು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಲಾಯಿತು. ಕ್ರಿಕೆಟ್ ದಂತಕಥೆ ಎರ್ರಪಳ್ಳಿ ಪ್ರಸನ್ನ ಅವರು ಟ್ರೋಫಿಯನ್ನು ಅನಾವರಣಗೊಳಿಸಿದರು. ‘ಮಳೆಗಾಲದ ಸಮಯವಾಗಿರುವುದರಿಂದ ಗ್ರಾಮಾಂತರ ವಿಭಾಗಗಳಾದ ಹುಬ್ಬಳ್ಳಿ, ಮೈಸೂರು ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ನಡೆಸುವುದು ಕಷ್ಟ. ಬೆಂಗಳೂರಿನಲ್ಲಿ ಸಬ್‌ ಏರ್ ಸಿಸ್ಟಮ್ ಇರುವುದರಿಂದ ಮಳೆ ಬಂದರೂ ‍ಕ್ರೀಡಾಂಗಣವನ್ನು ಬೇಗನೆ ಪಂದ್ಯಕ್ಕೆ ಸಿದ್ಧಗೊಳಿಸಬಹುದು. ಅಲ್ಲದೇ ಅಧಿಕೃತ ಪ್ರಸಾರಕ ವಾಹಿನಿಗೆ ಬೆಂಗಳೂರಿನಲ್ಲಿ ಪಂದ್ಯಗಳು ನಡೆದರೆ ನೇರಪ್ರಸಾರಕ್ಕೆ ಹೆಚ್ಚು ಅನುಕೂಲವಾಗುತ್ತದೆ’ ಎಂದು ಕೆಎಸ್‌ಸಿಎ ಜಂಟಿ ಕಾರ್ಯದರ್ಶಿ ಶಾವೀರ್ ತಾರಾಪುರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪ್ರತಿ ಬಾರಿ ಡಿವಿಷನ್ ಲೀಗ್, ಕ್ಲಬ್‌ ಲೀಗ್ ಟೂರ್ನಿಗಳ ಮೂಲಕ ಕೆಎಸ್‌ಸಿಎ ಋತುಗಳು ಆರಂಭವಾಗುತ್ತಿದ್ದವು. ಈ ವರ್ಷ ಫ್ರ್ಯಾಂಚೈಸಿ ಲೀಗ್‌ ಮೇಲೆ ಹೆಚ್ಚು ಗಮನ ನೀಡಿ ಋತು ಆರಂಭವಾಗುತ್ತಿದೆಯೇ ಎಂಬ ಪ್ರಶ್ನೆಗೆ ಶಾವೀರ್ ಪ್ರತಿಕ್ರಿಯಿಸಿದರು. ‘ಹಾಗೇನಿಲ್ಲ. ಈಗಾಗಲೇ ವಯೋಮಿತಿ ಕ್ಲಬ್‌ ಟೂರ್ನಿಗಳು ಆರಂಭವಾಗಿವೆ. 16 ವರ್ಷ ಹಾಗೂ 19 ವರ್ಷದೊಳಗಿನವರ ಅಂತರ ಕ್ಲಬ್ ಟೂರ್ನಿಗಳು ನಡೆಯುತ್ತಿವೆ. ಮೊದಲ ಮೂರು ಡಿವಿಷನ್ ಲೀಗ್ ಟೂರ್ನಿಗಳು ಇದೇ 29ರಿಂದ ಆರಂಭವಾಗಲಿವೆ. ಮಹಾರಾಜ ಟ್ರೋಫಿ ಟೂರ್ನಿ ಆರಂಭಕ್ಕೂ ಬಹಳ ಮುನ್ನವೇ ಡಿವಿಷನ್ ಲೀಗ್‌ಗಳನ್ನು ಯೋಜಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು. ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್, ರನ್ನರ್ಸ್ ಅಪ್ ಮೈಸೂರು ವಾರಿಯರ್ಸ್, ಗುಲ್ಬರ್ಗ ಮಿಸ್ಟಿಕ್ಸ್, ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರ್ಯಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಟೂರ್ನಿಯಲ್ಲಿ ಆಡಲಿವೆ. ಜುಲೈ 25ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. 700 ಆಟಗಾರರು ಖರೀದಿಗೆ ಲಭ್ಯರಿದ್ದಾರೆ. ಕಳೆದ ಋತುವಿನಲ್ಲಿ ಮೂರು ಕ್ಲಬ್‌ಗಳ ನಡುವೆ ಫಲಿತಾಂಶದ ಕುರಿತ ಆಕ್ಷೇಪದಿಂದಾಗಿ ಡಿವಿಷನ್ ಲೀಗ್ ಟೂರ್ನಿ ಮುಕ್ತಾಯವು ತಡವಾಗಿತ್ತು. ಅದರಿಂದಾಗಿ ಈ ಋತುವಿನ ಲೀಗ್ ಟೂರ್ನಿಗಳು ವಿಳಂಬವಾಗಿವೆ. ಕೇವಲ 16 ಮತ್ತು 19 ವರ್ಷದೊಳಗಿನವರ ಅಂತರ ಕ್ಲಬ್ ಟೂರ್ನಿಗಳನ್ನಷ್ಟೇ ಆರಂಭಿಸಲಾಗಿದೆ. ಇದು ರಾಜ್ಯ ಕ್ರಿಕೆಟ್ ವಲಯದಲ್ಲಿ ಟೀಕೆಗಳಿಗೆ ಗ್ರಾಸವಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.