T20 : ಭಾರತ, ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದ ಹೈಲೈಟ್ಸ್‌ ಗಯಾನಾ: ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ಗೆ ಲಗ್ಗೆ ಇಟ್ಟಿತು. ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಗುರುವಾರ ಮಧ್ಯರಾತ್ರಿ (ಭಾರತೀಯ ಕಾಲಮಾನ) ಮುಗಿದ ಸೆಮಿಫೈನಲ್ ಪಂದ್ಯದಲ್ಲಿ ‘ಹಾಲಿ ಚಾಂಪಿಯನ್’ ಇಂಗ್ಲೆಂಡ್ ತಂಡವನ್ನು 68 ರನ್‌ಗಳಿಂದ ಮಣಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತು. ಭಾರತ ತಂಡವು ಈ ಟೂರ್ನಿಯಲ್ಲಿ ಅಜೇಯವಾಗಿ ಉಳಿದು ಅಂತಿಮ ಪಂದ್ಯಕ್ಕೆ ಪ್ರವೇಶಿಸಿತು. ಮಳೆಯಿಂದ ವಿಳಂಬವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ತಂಡವು 172 ರನ್‌ಗಳ ಗೆಲುವಿನ ಗುರಿ ಒಡ್ಡಿತು. ನಾಯಕ ರೋಹಿತ್‌ ಶರ್ಮಾ 57, ಸೂರ್ಯಕುಮಾರ್‌ ಯಾದವ್‌ ಅವರ 47 ರನ್‌ಗಳ ಬಲದಿಂದ ಭಾರತ ತಂಡವು ಪಂದ್ಯದಲ್ಲಿ 7 ವಿಕೆಟ್‌ಗೆ 171 ರನ್‌ ಗಳಿಸಿತು. ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕ ದಾಖಲಿಸಿದರು, ಸೂರ್ಯಕುಮಾರ್‌ ಕೂಡ 3 ರನ್‌ಗಳ ಅಂತರದಲ್ಲಿ ಅರ್ಧ ಶತಕ ತಪ್ಪಿಸಿಕೊಂಡರು. ಈ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿ ಅವರ ವೈಫಲ್ಯ ಮುಂದುವರಿಯಿತು. ರಿಷಭ್ ಪಂತ್ ಕೇವಲ 4 ರನ್‌ಗಳಿಸಿ ಔಟಾದರು. ಶಿವಂ ದುಬೆ ಶೂನ್ಯಕ್ಕೆ ಪೆವಿಲಿಯನ್‌ಗೆ ಮರಳಿದರು. ಹಾರ್ದಿಕ್‌ ಪಾಂಡ್ಯ 23, ರವೀಂದ್ರ ಜಡೇಜ ಔಟಾಗದೇ 17, ಅಕ್ಷರ್ ಪಟೇಲ್ 13 ರನ್‌ ಹೊಡೆದು ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿ ತಂಡದ ಮೊತ್ತ ಹೆಚ್ಚಿಸಿದರು. ಇಂಗ್ಲೆಂಡ್‌ನ ಕ್ರಿಸ್‌ ಜೋರ್ಡನ್‌ ಮೂರು ವಿಕೆಟ್‌, ರೀಸ್ ಟಾಪ್ಲಿ, ಜೋಫ್ರಾ ಆರ್ಚರ್, ಸ್ಯಾಮ್ ಕರನ್, ಆದಿಲ್ ರಶೀದ್ ತಲಾ ಒಂದು ವಿಕೆಟ್‌ ಪಡೆದರು. ಬಟ್ಲರ್‌ 23, ಬ್ರೂಕ್‌ 25, ಜೋಫ್ರಾ ಆರ್ಚರ್ 21 ರನ್‌ಗಳಿಸಿದರು. ಪ್ರಮುಖ ಬ್ಯಾಟರ್‌ಗಳು ಮತ್ತು ಆಲ್‌ರೌಂಡರ್‌ಗಳು ರನ್‌ ಕಾಣಿಕೆ ನೀಡುವಲ್ಲಿ ವಿಫಲರಾದರು ಎಡಗೈ ಸ್ಪಿನ್ ಜೋಡಿ ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ತಲಾ 3 ವಿಕೆಟ್‌ ಪಡೆದರು. ಬೂಮ್ರಾ 2 ವಿಕೆಟ್‌ ಕಬಳಿಸಿದರು. ಇಂಗ್ಲೆಂಡ್ 16.4 ಓವರ್‌ಗಳಲ್ಲಿ 103 ರನ್‌ಗಳಿಗೆ ಆಲೌಟ್‌ ಆಯಿತು. ಮಳೆ ಕಾಟದಿಂದ ಪಂದ್ಯ ಎರಡು ಸಲ ಸ್ಥಗಿತಗೊಂಡಿತ್ತು. ಶನಿವಾರ ನಡೆಯುವ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಭಾರತ ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.