2023: ನೆದರ್ಲೆಂಡ್ಸ್‌ ವಿರುದ್ಧ ಮೊದಲ ಜಯದ ಹತಾಶ ಯತ್ನದಲ್ಲಿ ಲಂಕಾ ಲಖನೌ: ಪ್ರಬಲ ದಕ್ಷಿಣ ಆಫ್ರಿಕಾ ತಂಡಕ್ಕೆ ಅನಿರೀಕ್ಷಿತ ಆಘಾತ ನೀಡಿದ ಉತ್ಸಾಹದಲ್ಲಿರುವ ನೆದರ್ಲೆಂಡ್ಸ್‌ ತಂಡ ಶನಿವಾರ ಇಲ್ಲಿ ನಡೆಯುವ ವಿಶ್ವಕಪ್‌ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಆಡಿರುವ ಮೂರೂ ಪಂದ್ಯಗಳಲ್ಲಿ ಸೋಲುಂಡಿರುವ ಲಂಕನ್ನರು ಮೊದಲ ಗೆಲುವಿಗಾಗಿ ಹಾತೊರೆಯುತ್ತಿದ್ದಾರೆ. ಧರ್ಮಶಾಲಾದಲ್ಲಿ ಕಳೆದ ಮಂಗಳವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲುವ ಮೂಲಕ ನೆದರ್ಲೆಂಡ್ಸ್ ತಂಡ ಟೆಸ್ಟ್‌ ತಂಡವೊಂದರ ಎದುರು ಏಕದಿನ ಮಾದರಿಯಲ್ಲಿ ಮೊದಲ ಗೆಲುವು ದಾಖಲಿಸಿತ್ತು. ಇದು ತಂಡದ ನೈತಿಕ ಸ್ಥೈರ್ಯ ಹೆಚ್ಚಿಸಿದ್ದು, ಈಗ ಎರಡನೇ ಗೆಲುವಿನ ನಿರೀಕ್ಷೆಯಲ್ಲಿದೆ. ಆದರೆ ತಂಡದ ಮೊದಲ ಮೂರು ಅಗ್ರ ಆಟಗಾರರಾದ– ವಿಕ್ರಮಜಿತ್‌ ಸಿಂಗ್‌, ಮ್ಯಾಕ್ಸ್ ಒ ಡೌಡ್ ಮತ್ತು ಕಾಲಿನ್ ಆ್ಯಕರ್‌ಮನ್ ಅವರು ತಂಡಕ್ಕೆ ಉತ್ತಮ ಆರಂಭ ನೀಡುತ್ತಿಲ್ಲ. ಹೀಗಾಗಿ ಮಧ್ಯಮ ಕ್ರಮಾಂಕದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಆಲ್‌ರೌಂಡರ್ ಬಾಸ್ ಡಿ ಲೀಡೆ ಅವರು ಬೌಲಿಂಗ್‌ನಲ್ಲಿ ಮಿಂಚಿದ್ದಾರೆ. ಆದರೆ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಆಟವಾಡಿಲ್ಲ. ಇನ್ನೊಂದೆಡೆ ಶ್ರೀಲಂಕಾಕ್ಕೆ ಬೌಲಿಂಗ್‌ ವಿಭಾಗದಲ್ಲಿ ಸಮಸ್ಯೆ ಎದುರಾಗಿದೆ. ತಂಡ ಸಾಂಘಿಕ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಆ ತಂಡದ ಬ್ಯಾಟರ್‌ಗಳು ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ 300ಕ್ಕೂ ಅಧಿಕ ಮೊತ್ತ ಕಲೆಹಾಕಿದ್ದರು. ಆದರೆ ಬೌಲಿಂಗ್‌ ಕೈಕೊಡುತ್ತಿದೆ. ಕೆಲವು ಬೌಲರ್‌ಗಳು ಗಾಯಾಳಾಗಿದ್ದಾರೆ. ಏಳು ವಿಕೆಟ್‌ ಪಡೆದಿರುವ ವೇಗಿ ದಿಲ್ಶನ್ ಮಧುಶಂಕ ಅವರೇ ತಂಡದ ಪ್ರಮುಖ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಆಸ್ಟ್ರೇಲಿಯಾ ವಿರುದ್ದ ಇದೇ ಮೈದಾನದಲ್ಲಿ ಮಧುಶಂಕ ಉತ್ತಮ ಪ್ರದರ್ಶನ ನೀಡಿದ್ದಾರೆ. ಡಚ್‌ ತಂಡ, ಎಡಗೈ ಸ್ಪಿನ್ನರ್‌ ರೊಲೋಫ್ ವಾನ್‌ಡೆರ್‌ ಮೆರ್ವ್ ಅವರಿಂದ ಹೆಚ್ಚಿನ ಕೊಡುಗೆ ನಿರೀಕ್ಷಿಸುತ್ತಿದೆ. ಪಿಚ್‌ನಲ್ಲಿ ಅವರಿಗೆ ನೆರವೂ ಸಿಗಬಹುದು. ಎರಡು ತಿಂಗಳ ಹಿಂದೆ ಜಿಂಬಾಬ್ವೆಯಲ್ಲಿ ನಡೆದ ಅರ್ಹತಾ ಟೂರ್ನಿಯಲ್ಲಿ ಶ್ರೀಲಂಕಾ ಎರಡು ಬಾರಿ ನೆದರ್ಲೆಂಡ್ಸ್‌ ತಂಡವನ್ನು ಸೋಲಿಸಿದೆ. ಇವೆರಡು ತಂಡಗಳು ಪ್ರಧಾನ ಸುತ್ತಿಗೆ ಅರ್ಹತೆ ಪಡೆದಿದ್ದವು. ಪಂದ್ಯ ಆರಂಭ: ಬೆಳಿಗ್ಗೆ 10.30. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.