: ದಕ್ಷಿಣ ಆಫ್ರಿಕಾ– ಇಂಗ್ಲೆಂಡ್‌ ಪೈಪೋಟಿ, ಆಘಾತದಿಂದ ಹೊರಬರುವ ಪ್ರಯತ್ನ ಮುಂಬೈ: ಕಳೆದ ಪಂದ್ಯದಲ್ಲಿ ಎದುರಾಗಿದ್ದ ಅನಿರೀಕ್ಷಿತ ಆಘಾತದಿಂದ ಹೊರಬರುವ ಪ್ರಯತ್ನದಲ್ಲಿರುವ ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಶನಿವಾರ ಸೆಣಸಾಟ ನಡೆಸಲಿವೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಗೆದ್ದು ಪಾಯಿಂಟ್‌ ಪಟ್ಟಿಯಲ್ಲಿ ಮೇಲಕ್ಕೇರುವ ಗುರಿಯನ್ನು ಉಭಯ ತಂಡಗಳು ಹೊಂದಿವೆ. ಈ ಟೂರ್ನಿಯಲ್ಲಿ ಇದುವರೆಗಿನ ಗರಿಷ್ಠ ಮೊತ್ತ (5ಕ್ಕೆ 428) ಪೇರಿಸಿದ್ದ ದಕ್ಷಿಣ ಆಫ್ರಿಕಾ ತಂಡ, ಧರ್ಮಶಾಲಾದಲ್ಲಿ ನಡೆದಿದ್ದ ಹಿಂದಿನ ಪಂದ್ಯದಲ್ಲಿ ನೆದರ್ಲೆಂಡ್ಸ್‌ ಎದುರು ಆಘಾತ ಅನುಭವಿಸಿತ್ತು. ಅದೇ ರೀತಿ, ಇಂಗ್ಲೆಂಡ್‌ ತಂಡ ದೆಹಲಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಅಘ್ಗಾನಿಸ್ತಾನ ಎದುರು ಪರಾಭವಗೊಂಡಿತ್ತು. ತೆಂಬಾ ಬವುಮಾ ಬಳಗ ಮೊದಲ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳನ್ನು 100 ರನ್‌ಗಳಿಗೂ ಅಧಿಕ ಅಂತರದಿಂದ ಮಣಿಸಿ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿತ್ತು. ಆದರೆ ನೆದರ್ಲೆಂಡ್ಸ್‌ ಕೈಯಲ್ಲಿ ಎದುರಾದ ಸೋಲು, ಒತ್ತಡದ ಸನ್ನಿವೇಶದಲ್ಲಿ ತಂಡದ ದೌರ್ಬಲ್ಯ ಏನೆಂಬುದನ್ನು ಎತ್ತಿ ತೋರಿಸಿತ್ತು. ಆದರೂ, ಒಂದು ತಂಡವಾಗಿ ಹೋರಾಡುವಲ್ಲಿ ವಿಫಲವಾಗಿರುವ ಜೋಸ್‌ ಬಟ್ಲರ್‌ ಬಳಗವನ್ನು ಮಣಿಸಲು ಬೇಕಾದಷ್ಟು ಸಾಮರ್ಥ್ಯವನ್ನು ದಕ್ಷಿಣ ಆಫ್ರಿಕಾ ಹೊಂದಿದೆ. ಸತತ ಎರಡು ಶತಕ ಗಳಿಸಿದ್ದ ಕ್ವಿಂಟನ್‌ ಡಿ ಕಾಕ್ ಅಲ್ಲದೆ ಏಡನ್‌ ಮರ್ಕರಮ್‌ ಮತ್ತು ರಸಿ ವ್ಯಾನ್‌ ಡೆರ್‌ ಡಸೆ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಡಿ ಕಾಕ್‌ ತಮ್ಮ ಫಾರ್ಮ್‌ಅನ್ನು ಇಂಗ್ಲೆಂಡ್‌ ವಿರುದ್ಧವೂ ಮುಂದುವರಿಸುವ ವಿಶ್ವಾಸಲ್ಲಿದ್ದಾರೆ. ವೇಗದ ಬೌಲರ್‌ಗಳಾದ ಕಗಿಸೊ ರಬಾಡ (7 ವಿಕೆಟ್‌) ಹಾಗೂ ಮಾರ್ಕೊ ಜಾನ್ಸೆನ್‌ (6 ವಿಕೆಟ್‌) ಅವರು ಎದುರಾಳಿ ಬ್ಯಾಟರ್‌ಗಳಿಗೆ ಸವಾಲಾಗಬಲ್ಲರು. ಇದುವರೆಗೆ ಪ್ರಭಾವಿ ಎನಿಸದ ಲುಂಗಿ ಗಿಡಿ ಅವರೂ ಫಾರ್ಮ್‌ ಕಂಡುಕೊಂಡರೆ, ಇಂಗ್ಲೆಂಡ್‌ಗೆ ದೊಡ್ಡ ಮೊತ್ತ ಪೇರಿಸುವುದು ಕಷ್ಟವಾಗಲಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ಕೈಯಲ್ಲಿ ‘ಪೆಟ್ಟು’ ತಿಂದಿದ್ದ ಬಟ್ಲರ್‌ ಬಳಗ, ಬಾಂಗ್ಲಾದೇಶ ಎದುರು ಗೆದ್ದಿತ್ತು. ಆದರೆ ಅಫ್ಗನ್‌ ಎದುರು ಮುಗ್ಗರಿಸಿತ್ತು. ಮೂರು ಪಂದ್ಯಗಳಲ್ಲಿ ಕ್ರಮವಾಗಿ 43, 20 ಹಾಗೂ 9 ರನ್‌ ಗಳಿಸಿರುವ ಬಟ್ಲರ್‌ ಅವರಿಂದ ತಂಡ ಉತ್ತಮ ಆಟ ನಿರೀಕ್ಷಿಸುತ್ತಿದೆ. ಲಿಯಾಮ್‌ ಲಿವಿಂಗ್‌ಸ್ಟೋನ್‌ (ಮೂರು ಪಂದ್ಯಗಳಲ್ಲಿ ಕ್ರಮವಾಗಿ 20, 0, 10 ರನ್‌) ಅವರ ಕಳಪೆ ಫಾರ್ಮ್‌ ಚಿಂತೆಗೆ ಕಾರಣವಾಗಿದೆ. ಎರಡು ಅರ್ಧಶತಕಗಳನ್ನು ಗಳಿಸಿರುವ ಜೋ ರೂಟ್‌ ಮತ್ತು ಒಂದು ಶತಕ ಹೊಡೆದಿರುವ ಡೇವಿಡ್‌ ಮಲಾನ್‌ ಹೊರತುಪಡಿಸಿ, ಇತರ ಬ್ಯಾಟರ್‌ಗಳಿಂದ ಇನ್ನೂ ದೊಡ್ಡ ಮೊತ್ತ ಬಂದಿಲ್ಲ. ವಾಂಖೆಡೆ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಬೃಹತ್‌ ಮೊತ್ತದ ಹೋರಾಟ ನಿರೀಕ್ಷಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಐ‍ಪಿಎಲ್‌ ಪಂದ್ಯಗಳು ನಡೆದ ಬಳಿಕ ಅಂಗಳದ ಔಟ್‌ಫೀಲ್ಡ್‌ಅನ್ನು ಹೊಸದಾಗಿ ಸಿದ್ಧಪಡಿಸಲಾಗಿದೆ. ಪಂದ್ಯ ಆರಂಭ: ಮಧ್ಯಾಹ್ನ 2 ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್ - - ಸ್ಟೋಕ್ಸ್‌ ಆಡುವ ಸಾಧ್ಯತೆ ಆಲ್‌ರೌಂಡರ್‌ ಬೆನ್‌ಸ್ಟೋಕ್ಸ್‌ ಅವರು ಈ ಪಂದ್ಯದಲ್ಲಿ ಕಣಕ್ಕಿಳಿಯುವ ವಿಶ್ವಾಸವನ್ನು ಇಂಗ್ಲೆಂಡ್‌ ತಂಡ ಹೊಂದಿದೆ. ಗಾಯದಿಂದ ಚೇತರಿಸಿಕೊಂಡಿರುವ ಅವರು ಸಹ ಆಟಗಾರರ ಜತೆ ಅಭ್ಯಾಸ ನಡೆಸಿದ್ದಾರೆ. ಸೊಂಟ ನೋವಿನಿಂದ ಬಳಲಿದ್ದ ಸ್ಟೋಕ್ಸ್ ಮೊದಲ ಮೂರು ಪಂದ್ಯಗಳಲ್ಲಿ ಆಡಿರಲಿಲ್ಲ. ‘ಬೆನ್‌ ಅವರು ಪೂರ್ಣ ಪ್ರಮಾಣದಲ್ಲಿ ಅಭ್ಯಾಸ ನಡೆಸಿದ್ದು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅವರ ಸಾನ್ನಿಧ್ಯವು ಸಹ ಆಟಗಾರರಿಗೆ ಹುರುಪು ನೀಡಲಿದೆ’ ಎಂದು ಇಂಗ್ಲೆಂಡ್‌ ತಂಡದ ನಾಯಕ ಜೋಸ್‌ ಬಟ್ಲರ್‌ ಹೇಳಿದ್ದಾರೆ. - - ಬಲಾಬಲ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಉಭಯ ತಂಡಗಳು ಏಳು ಸಲ ಎದುರಾಗಿದ್ದು ಇಂಗ್ಲೆಂಡ್‌ 4–3 ರಿಂದ ಮುನ್ನಡೆಯಲ್ಲಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಇವೆರಡು ತಂಡಗಳು ಇದೇ ಮೊದಲ ಬಾರಿ ಮುಖಾಮುಖಿಯಾಗಲಿವೆ. ಏಕದಿನ ಕ್ರಿಕೆಟ್‌ನಲ್ಲಿ ಎರಡು ತಂಡಗಳು 69 ಸಲ ಹಣಾಹಣಿ ನಡೆಸಿವೆ. ದಕ್ಷಿಣ ಆಫ್ರಿಕಾ 33 ರಲ್ಲಿ ಹಾಗೂ ಇಂಗ್ಲೆಂಡ್‌ 30 ರಲ್ಲಿ ಗೆದ್ದಿವೆ. ಒಂದು ಪಂದ್ಯ ಟೈ ಆಗಿದ್ದು ಐದು ಪಂದ್ಯಗಳು ರದ್ದುಗೊಂಡಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.