: ದಕ್ಷಿಣ ಆಫ್ರಿಕಾಕ್ಕೆ ಅಚ್ಚರಿಯ ಸೋಲು– ಮಿಂಚಿದ ನೆದರ್ಲೆಂಡ್ಸ್ ಧರ್ಮಶಾಲಾ: ಈ ಬಾರಿಯ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮೂರು ದಿನಗಳ ಅಂತರದಲ್ಲಿ ಎರಡನೇ ಅಚ್ಚರಿಯ ಫಲಿತಾಂಶ ದಾಖಲಾಯಿತು. ಮಂಗಳವಾರ ನಡೆದ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಹೆಚ್ಚು ಅನುಭವವಿಲ್ಲದ ನೆದರ್ಲೆಂಡ್ಸ್‌ ತಂಡವು 38 ರನ್‌ಗಳಿಂದ ಮಣಿಸಿತು. ಅಕ್ಟೋಬರ್ 15ರಂದು ನವದೆಹಲಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡವು ತನಗಿಂತಲೂ ಬಲಾಢ್ಯವಾಗಿದ್ದ ಇಂಗ್ಲೆಂಡ್ ತಂಡವನ್ನು ಸೋಲಿಸಿತ್ತು. ಇದೀಗ ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ಆಘಾತ ಅನುಭವಿಸಿತು. ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್‌ ತಂಡದ ಗೆಲುವಿನಲ್ಲಿ ನಾಯಕ ಸ್ಕಾಟ್ ಎಡ್ವರ್ಡ್ (ಔಟಾಗದೇ 78; 69ಎ, 4X10, 6X1) ಮತ್ತು ಬೌಲರ್‌ಗಳ ಸಂಘಟಿತ ದಾಳಿಯು ಪ್ರಮುಖ ಪಾತ್ರ ವಹಿಸಿದವು. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬೌಲರ್‌ಗಳ ಉತ್ತಮ ದಾಳಿಯ ನಡುವೆಯೂ ನೆದರ್ಲೆಂಡ್ಸ್ ತಂಡವು 43 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 245 ರನ್‌ ಗಳಿಸಿತು. ಮಳೆಯಿಂದಾಗಿ ಪಂದ್ಯದ ಸಮಯವು ವ್ಯರ್ಥವಾಗಿದ್ದರಿಂದ ಇನಿಂಗ್ಸ್‌ ಅನ್ನು 43 ಓವರ್‌ಗೆ ನಿಗದಿಪಡಿಸಲಾಯಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು 42.5 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 207 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡವು ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಎದುರು 428 ರನ್‌ ಗಳಿಸಿತ್ತು. ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 311 ರನ್‌ಗಳನ್ನು ಗಳಿಸಿತ್ತು. ಎರಡೂ ಹಣಾಹಣಿಗಳಲ್ಲಿಯೂ ಭರ್ಜರಿ ಗೆಲುವು ಸಾಧಿಸಿದ್ದ ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳು ಅನನುಭವಿ ಡಚ್ ಬೌಲರ್‌ಗಳ ಎದುರು ಮಂಕಾದರು. ಅತಿಯಾದ ಆತ್ಮವಿಶ್ವಾಸದಿಂದ ಬೀಸಿದ ಶಾಟ್‌ಗಳು ಕೈಕೊಟ್ಟವು. ತೆಂಬಾ ಬವುಮಾ, ಕ್ವಿಂಟನ್ ಡಿ ಕಾಕ್, ರೆಸಿ ವ್ಯಾನ್‌ ಡೆರ್ ಡಸೆ, ಏಡನ್ ಮರ್ಕರಂ ಹಾಗೂ ಬೀಸು ಹೊಡೆತಗಳ ಆಟಗಾರ ಹೆನ್ರಿಚ್ ಕ್ಲಾಸೆನ್ ಅವರನ್ನು ಕಟ್ಟಿಹಾಕುವಲ್ಲಿ ಬೌಲರ್‌ಗಳು ಯಶಸ್ವಿಯಾದರು. ಡೇವಿಡ್ ಮಿಲ್ಲರ್ (43; 52ಎಸೆತ ) ಅವರೊಬ್ಬರೇ ತುಸು ಹೆಚ್ಚು ಹೊತ್ತು ಕ್ರೀಸ್‌ನಲ್ಲಿದ್ದರು. ಆದರೂ ಅವರಿಗೆ ತಮ್ಮ ತಂಡವನ್ನು ಗೆಲುವಿನ ಗಡಿ ಮುಟ್ಟಿಸಲು ಸಾಧ್ಯವಾಗಲಿಲ್ಲ. ಈಚೆಗೆ ಅಹಮದಾಬಾದಿನಲ್ಲಿ ಭಾರತ ತಂಡದ ಬೌಲರ್‌ಗಳು ಪಾಕ್ ತಂಡದ ವಿರುದ್ಧ ಅನುಸರಿಸಿದ್ದ ತಂತ್ರಗಾರಿಕೆಯ ರೀತಿಯನ್ನು ನೆದರ್ಲೆಂಡ್ಸ್ ಬೌಲಿಂಗ್ ಪಡೆಯೂ ಇಲ್ಲಿ ಅನುಕರಿಸಿದಂತೆ ಕಂಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.