ದನುಷ್ಕಾ ಗುಣತಿಲಕ ನಿಷೇಧ ತೆರವು: ರಾಷ್ಟ್ರೀಯ ಕ್ರಿಕೆಟ್‌ ತಂಡ ಸೇರುವ ಹಾದಿ ಸುಗಮ ಕೊಲಂಬೊ: ಶ್ರೀಲಂಕಾದ ಕ್ರಿಕೆಟಿಗ ದನುಷ್ಕಾ ಗುಣತಿಲಕ ಮೇಲೆ ಹೇರಲಾಗಿದ್ದ ನಿಷೇಧವನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್‌ಎಲ್‌ಸಿ) ಮಂಗಳವಾರ ತೆರವು ಮಾಡಿದೆ. ಹೀಗಾಗಿ, ಎಡಗೈ ಬ್ಯಾಟರ್ ಆಗಿರುವ ಅವರಿಗೆ ಮತ್ತೆ ರಾಷ್ಟ್ರೀಯ ಕ್ರಿಕೆಟ್‌ ತಂಡವನ್ನು ಸೇರುವ ಹಾದಿ ಸುಗಮವಾದಂತಾಗಿದೆ. ಆಸ್ಟ್ರೇಲಿಯಾದಲ್ಲಿ ದನುಷ್ಕ ಮೇಲಿನ ಕ್ರಿಮಿನಲ್ ಆರೋಪಗಳ ಪ್ರಭಾವದ ಕುರಿತು ತನಿಖೆ ನಡೆಸಲು ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಸ್ವತಂತ್ರ ವಿಚಾರಣಾ ಸಮಿತಿಯನ್ನು ನೇಮಿಸಿತ್ತು. ಆ ಸಮಿತಿಯು ದನುಷ್ಕಾ ಮೇಲಿನ ನಿಷೇಧವನ್ನು ತೆಗೆದುಹಾಕಲು ಶಿಫಾರಸು ಮಾಡಿದೆ. 2022ರ ನವೆಂಬರ್‌ನಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ ವೇಳೆ ಈ ಘಟನೆ ನಡೆದಿತ್ತು. ಲಂಕಾ ಕ್ರಿಕೆಟ್‌ ತಂಡದಲ್ಲಿದ್ದ 32 ವರ್ಷದ ದನುಷ್ಕಾ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿತ್ತು. ಮಹಿಳೆಯೊಬ್ಬರು ದೂರು ನೀಡಿದ ನಂತರ ಅವರನ್ನು ಬಂಧಿಸಲಾಗಿತ್ತು. ನ್ಯೂಸೌತ್ ವೇಲ್ಸ್‌ನ ಜಿಲ್ಲಾ ನ್ಯಾಯಾಲಯವು ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಲಾಗಿದೆ. 11 ತಿಂಗಳ ಪ್ರಯಾಣ ನಿರ್ಬಂಧದ ಬಳಿಕ ಗುಣತಿಲಕ ಅವರು ಅಕ್ಟೋಬರ್ 3ರಂದು ಶ್ರೀಲಂಕಾಕ್ಕೆ ಮರಳಿದ್ದಾರೆ. ಇದರ ಬೆನ್ನಲ್ಲೇ ಶ್ರೀಲಂಕಾ ಕ್ರಿಕೆಟ್‌ ಮಂಡಳಿಯು ಅವರ ಮೇಲಿನ ನಿಷೇಧವನ್ನು ತೆಗೆದು ಹಾಕಿದೆ. 8 ಟೆಸ್ಟ್, 47 ಏಕದಿನ ಮತ್ತು 46 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಅವರು ಆಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.