: ಕೊಹ್ಲಿ ಶತಕದ ಅಬ್ಬರ; ಭಾರತಕ್ಕೆ ಸತತ 4ನೇ ಗೆಲುವಿನ ಸಿಹಿ ಪುಣೆ: ಮಹಾರಾಷ್ಟ್ರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗುರುವಾರ ವಿರಾಟ್ ಕೊಹ್ಲಿಯ ಚೆಂದದ ಶತಕ ಅರಳಿತು. ಜೊತೆಗೆ ಭಾರತ ತಂಡವು ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಸತತ ನಾಲ್ಕನೇ ಜಯವನ್ನೂ ದಾಖಲಿಸಿತು. ಬಾಂಗ್ಲಾದೇಶವು ಸತತ ಮೂರನೇ ಪಂದ್ಯ ಸೋತಿತು. ಏಕದಿನ ಮಾದರಿಯಲ್ಲಿ 48ನೇ ಶತಕ ಬಾರಿಸಿದ ವಿರಾಟ್ ಬಲದಿಂದ ಭಾರತ ತಂಡವು ಬಾಂಗ್ಲಾ ಎದುರು 7 ವಿಕೆಟ್‌ಗಳಿಂದ ಜಯಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 256 ರನ್‌ ಗಳಿಸಿತು. ಈ ಗುರಿ ಬೆನ್ನಟ್ಟಿದ ಭಾರತ ತಂಡವು 41.3 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 261 ರನ್‌ ಗಳಿಸಿ ಜಯಿಸಿತು. ಇಡೀ ಪಂದ್ಯದ ಬಹುತೇಕ ಸಮಯದಲ್ಲಿ ಭಾರತವೇ ಮೇಲುಗೈ ಸಾಧಿಸಿತ್ತು. ಶತಕ ಕೌತುಕ: ಆದರೆ ಪಂದ್ಯದ ಕೊನೆಯಲ್ಲಿ ಭಾರತದ ಜಯಕ್ಕೆ ಒಂಬತ್ತು ಓವರ್‌ಗಳಲ್ಲಿ ಎರಡು ರನ್‌ಗಳ ಅಗತ್ಯವಿದ್ದಾಗ ರೋಚಕತೆ ಸೃಷ್ಟಿಯಾಯಿತು! ಹೌದು; ಆ ಸಂದರ್ಭದಲ್ಲಿ ಕ್ರೀಸ್‌ನಲ್ಲಿ 97 ರನ್‌ ಗಳಿಸಿ ಆಡುತ್ತಿದ್ದ ವಿರಾಟ್ ಕೊಹ್ಲಿ ಶತಕ ಗಳಿಸುವರೇ ಎಂಬುದೇ ಆ ಕುತೂಹಲಕ್ಕೆ ಕಾರಣವಾಗಿತ್ತು. ನೂರರ ಗಡಿ ದಾಟಲು ವಿರಾಟ್ ಕೂಡ ಉತ್ಸುಕರಾಗಿದ್ದರು. ಆದ್ದರಿಂದ 42ನೇ ಓವರ್‌ನ ಮೊದಲೆರಡೂ ಎಸೆತಗಳಲ್ಲಿ ವಿರಾಟ್ ಒಂದು ಅಥವಾ ಎರಡು ರನ್‌ ಪಡೆಯಲು ಇಷ್ಟಪಡಲಿಲ್ಲ. ಮೂರನೇ ಎಸೆತವನ್ನು ಸಿಕ್ಸರ್‌ಗೆ ಎತ್ತಿದ ವಿರಾಟ್ (ಅಜೇಯ 103) ಸಂಭ್ರಮಿಸಿದರು. ಇನ್ನೊಂದು ಬದಿಯಲ್ಲಿದ್ದ ಕೆ.ಎಲ್. ರಾಹುಲ್ (ಔಟಾಗದೆ 34) ಅವರನ್ನು ಬಿಗಿದಪ್ಪಿಕೊಂಡರು. ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿರುವ ಸಚಿನ್ ತೆಂಡೂಲ್ಕರ್ (49) ದಾಖಲೆಯನ್ನು ಸರಿಗಟ್ಟಲು ಕೊಹ್ಲಿಗೆ ಇನ್ನೊಂದು ಶತಕ ಅಗತ್ಯವಿದೆ. ಇದನ್ನೂ ಓದಿ: ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ ಹಲವು ದಾಖಲೆ ಬರೆದ ಕಿಂಗ್ ಕೊಹ್ಲಿ ಉತ್ತಮ ಆರಂಭ: ಗುರಿ ಬೆನ್ನಟ್ಟಿದ ಭಾರತಕ್ಕೆ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 88 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಈ ವಿಶ್ವಕಪ್ ಟೂರ್ನಿಯಲ್ಲಿ ಎರಡನೇ ಪಂದ್ಯ ಆಡಿದ ಗಿಲ್ (53; 55ಎ) ಅರ್ಧಶತಕ ಗಳಿಸಿದರು. ರೋಹಿತ್ 48 ರನ್‌ ಗಳಿಸಿ ಔಟಾದರು. ಆದರೆ ಇವರ ಶ್ರಮ ವ್ಯರ್ಥವಾಗದಂತೆ ಕೊಹ್ಲಿ ನೋಡಿಕೊಂಡರು. ಬಾಂಗ್ಲಾದ ಬೌಲರ್‌ಗಳ ಎಸೆತಗಳಿಗೆ ತಕ್ಕ ಉತ್ತರ ನೀಡಿದ ಕೊಹ್ಲಿ, ಪುಲ್, ಡ್ರೈವ್‌ಗಳ ಚಿತ್ತಾರ ಬಿಡಿಸಿದರು. ಸ್ಪಿನ್ನರ್‌ಗಳಿಗೂ ಬಿಸಿ ಮುಟ್ಟಿಸಿದರು. ವಿರಾಟ್ ಮತ್ತು ರಾಹುಲ್ ಮುರಿಯದ ನಾಲ್ಕನೇ ಜೊತೆಯಾಟದಲ್ಲಿ 83 ರನ್‌ ಸೇರಿಸಿದರು. ರಾಹುಲ್ ಅಮೋಘ ಕ್ಯಾಚ್: ಈ ವಿಶ್ವಕಪ್ ಟೂರ್ನಿಯಲ್ಲಿ ವಿಕೆಟ್‌ಕೀಪಿಂಗ್ ಮಾಡುತ್ತಿರುವ ಕನ್ನಡಿಗ ಕೆ.ಎಲ್. ರಾಹುಲ್ ಬಾಂಗ್ಲಾದ ಮೆಹದಿ ಹಸನ್ ಮಿರಾಜ್ ಅವರ ಕ್ಯಾಚ್‌ ಪಡೆದ ರೀತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಸಿರಾಜ್ ಹಾಕಿದ ಎಸೆತವು ಲೆಗ್‌ಸ್ಟಂಪ್‌ನಿಂದ ತುಸು ಹೊರಗಿತ್ತು. ಮಿರಾಜ್ ಅದನ್ನು ಡ್ರೈವ್ ಮಾಡಲು ಪ್ರಯತ್ನಿಸಿದರು. ಚೆಂಡು ಬ್ಯಾಟ್ ಅಂಚು ಸವರಿ ಹಿಂದೆ ಧಾವಿಸಿತು. ರಾಹುಲ್ ತಮ್ಮ ಎಡಬದಿಗೆ ಜಿಗಿದು ಚೆಂಡನ್ನು ಹಿಡಿತಕ್ಕೆ ಪಡೆದರು. ಮಿರಾಜ್ ಚಕಿತರಾಗಿ ನಿರ್ಗಮಿಸಿದರು. ಬೂಮ್ರಾ ಯಾರ್ಕರ್: ಬಾಂಗ್ಲಾ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಅವರು ಹಾಕಿದ ನಿಖರ ಯಾರ್ಕರ್‌ಗೆ ಮಹಮುದುಲ್ಲಾ ಕ್ಲೀನ್‌ಬೌಲ್ಡ್‌ ಆದರು. 48 ರನ್‌ ಗಳಿಸಿದ್ದ ಅವರು ನಿರಾಶೆಯಿಂದ ಮರಳ ಬೇಕಾಯಿತು. ಅದಕ್ಕೂ ಮುಂಚಿನ ಎಸೆತದಲ್ಲಿ ಎಲ್‌ಬಿಡಬ್ಲ್ಯು ತೀರ್ಪಿನಲ್ಲಿ ಡಿಆರ್‌ಎಸ್ ಮೂಲಕ ‘ಜೀವದಾನ‘ ಪಡೆದಿದ್ದ ಮಹಮುದುಲ್ಲಾ ಅರ್ಧಶತಕ ಗಳಿಸಲು ಬೂಮ್ರಾ ಬಿಡಲಿಲ್ಲ. ವಿರಾಟ್ ಕೊಹ್ಲಿ (ರಾಯಿಟರ್ಸ್ ಚಿತ್ರ) ಹಾರ್ದಿಕ್‌ಗೆ ಗಾಯ; ಕೊಹ್ಲಿ ಬೌಲಿಂಗ್ ಮಧ್ಯಮವೇಗಿ ಹಾರ್ದಿಕ್ ಪಾಂಡ್ಯ ಅವರು ಇನಿಂಗ್ಸ್‌ನ ಒಂಬತ್ತನೇ ಓವರ್ ಬೌಲಿಂಗ್ ಮಾಡುವಾಗ ಕಾಲು ಉಳುಕಿಸಿಕೊಂಡು ವಿಶ್ರಾಂತಿಗೆ ತೆರಳಿದರು. ಅದರಿಂದಾಗಿ ಈ ಓವರ್‌ನಲ್ಲಿ ಉಳಿದಿದ್ದ ಮೂರು ಎಸೆತಗಳನ್ನು ಕೊಹ್ಲಿ ಹಾಕಿದರು. ಅದರಲ್ಲಿ ಎರಡು ರನ್‌ ಕೊಟ್ಟರು. ಹಾರ್ದಿಕ್ ಹಾಕಿದ್ದ ಓವರ್‌ನ ಎರಡು ಮತ್ತು ಮೂರನೇ ಎಸೆತಗಳಲ್ಲಿ ಲಿಟನ್ ದಾಸ್ ಬೌಂಡರಿ ಗಳಿಸಿದ್ದರು. ಹಾರ್ದಿಕ್ ಅವರಿಗೆ ಫಿಸಿಯೊ ಪ್ರಥಮ ಚಿಕಿತ್ಸೆ ನೀಡಿದರು. ಆದರೂ ರನ್‌ ಅಪ್ ತೆಗೆದುಕೊಳ್ಳಲು ಹಾರ್ದಿಕ್‌ಗೆ ಸಾಧ್ಯವಾಗದ ಕಾರಣ ಮೈದಾನದಿಂದ ಹೊರನಡೆದರು. ಪಂದ್ಯದಲ್ಲಿ ಇದು ಅವರಿಗೆ ಮೊದಲ ಓವರ್‌ ಆಗಿತ್ತು. ಬದಲೀ ಆಟಗಾರ ಸೂರ್ಯಕುಮಾರ್ ಯಾದವ್ ಅವರು ಫೀಲ್ಡಿಂಗ್ ನಿರ್ವಹಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.