: ಪುಟಿದೇಳುವ ಛಲದಲ್ಲಿ ಬಾಬರ್ ಬಳಗ ಬೆಂಗಳೂರು: ‘ಭಾರತ ತಂಡದ ಎದುರಿನ ಪಂದ್ಯದಲ್ಲಿ ಗೆಲುವು, ಸೋಲುಗಳು ನಮ್ಮ ಭವಿಷ್ಯವನ್ನು ಉಜ್ವಲಗೊಳಿಸಬಹುದು ಇಲ್ಲವೇ ನಾಶ ಕೂಡ ಮಾಡಿಬಿಡಬಹುದು. ಅಹಮದಾಬಾದಿನಲ್ಲಿ ನಮ್ಮ ತಪ್ಪಿನಿಂದಾಗಿ ಭಾರತದ ಎದುರು ಸೋತಿದ್ದೇವೆ. ಸುಧಾರಿಸಿಕೊಂಡು ವಿಶ್ವಕಪ್ ಜಯಿಸುವ ಅವಕಾಶ ಇನ್ನೂ ಇದೆ. ಅದರತ್ತ ಮುಂದುವರಿಯುತ್ತೇವೆ’ – ಪಾಕಿಸ್ತಾನ ಕ್ರಿಕೆಟ್ ತಂಡದ ಹಸನ್ ಅಲಿ ಅವರ ನುಡಿಗಳಿವು. ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಆಸ್ಟ್ರೇಲಿಯಾ ಎದುರು ಕಣಕ್ಕಿಳಿಯಲಿದೆ. ಹೋದ ಶನಿವಾರ ಮೊಟೇರಾದಲ್ಲಿ ಪಾಕ್ ತಂಡವು ಭಾರತದ ಎದುರು ಸೋತಿತ್ತು. ಅದರ ನಂತರ ಬೆಂಗಳೂರಿಗೆ ಬಂದಿದೆ. ತಂಡದ ಬಹುತೇಕ ಎಲ್ಲ ಆಟಗಾರರಿಗೆ ವೈರಲ್ ಜ್ವರ ಕಾಡಿತ್ತು. ಇದೀಗ ಎಲ್ಲರೂ ಗುಣಮುಖರಾಗಿದ್ದಾರೆ. ಬುಧವಾರ ಸಂಜೆ ಅಭ್ಯಾಸ ನಡೆಸಿದರು. ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಸನ್ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. ಈ ಟೂರ್ನಿಯಲ್ಲಿ ಪಾಕ್ ತಂಡವು ಮೊದಲೆರಡು ಪಂದ್ಯಗಳಲ್ಲಿ ಗೆದ್ದಿತ್ತು. ಆದರೆ, ಮೂರನೇ ಪಂದ್ಯದಲ್ಲಿ ಭಾರತದ ಎದುರು ಸೋತಿತ್ತು. ಆ ಪಂದ್ಯದಲ್ಲಿ ಉತ್ತಮ ಆರಂಭ ಲಭಿಸಿತ್ತು. ಆದರೆ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದ್ದರು. ಅದರಿಂದಾಗಿ ತಂಡವು ಸಾಧಾರಣ ಮೊತ್ತದ ಗುರಿ ಯೊಡ್ಡಿತ್ತು. ಈ ಪಂದ್ಯದಲ್ಲಿಯೂ ಪಾಕ್ ತಂಡವು ಮೊಹಮ್ಮದ್ ರಿಜ್ವಾನ್, ಬಾಬರ್ ಆಜಂ ಮತ್ತು ಅಬ್ದುಲ್ಲಾ ಶಫೀಕ್ ಅವರ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ವೇಗದ ಬೌಲಿಂಗ್‌ ವಿಭಾಗ ಉತ್ತಮವಾಗಿದೆ. ಆದರೆ, ಆಸ್ಟ್ರೇಲಿಯಾದ ಬ್ಯಾಟಿಂಗ್ ಪಡೆ ಬಲಾಢ್ಯವಾಗಿದೆ. ಮಿಚೆಲ್ ಮಾರ್ಷ್‌, ಜೋಷ್ ಇಂಗ್ಲಿಸ್ ಮತ್ತು ಮಾರ್ನಸ್ ಲಾಬುಷೇನ್ ಅವರು ಆ ಪಂದ್ಯದಲ್ಲಿ ಮಿಂಚಿದ್ದರು. ಇದು ಪಾಕ್ ಬೌಲರ್‌ಗಳಿಗೆ ಕಠಿಣ ಸವಾಲಾಗಬಹುದು. ಶಹೀನ್ ಆಫ್ರಿದಿ, ಹ್ಯಾರಿಸ್ ರವೂಫ್ ಹಾಗೂ ಹಸನ್ ಅಲಿ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಸ್ಪಿನ್ ಬೌಲಿಂಗ್ ವಿಭಾಗ ದುರ್ಬಲವಾಗಿದೆ. ಆದರೆ, ಆಸ್ಟ್ರೇಲಿಯಾ ತಂಡದ ಬೌಲಿಂಗ್ ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಬಲಿಷ್ಠವಾಗಿದೆ. ಸ್ಪಿನ್ನರ್ ಆ್ಯಡಂ ಜಂಪಾ ಅದ್ಭುತ ಲಯದಲ್ಲಿದ್ದಾರೆ. ರನ್‌ಗಳನ್ನು ನೀಡಿದರೂ ವಿಕೆಟ್ ಉರುಳಿಸುವ ಛಲದ ಆಟಗಾರ ಜಂಪಾ. ಬುಧವಾರ ಸಂಜೆ ನೆಟ್ಸ್‌ನಲ್ಲಿ ಲವಲವಿಕೆಯಿಂದಲೇ ಬೌಲಿಂಗ್ ಮಾಡಿದರು. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ತನ್ನ ಸ್ಪರ್ಧಾತ್ಮಕ ಗುಣಕ್ಕೆ ಖ್ಯಾತಿ ಪಡೆದಿದೆ. ಈ ಪಂದ್ಯದಲ್ಲಿಯೂ ಬೌಲರ್‌ ಮತ್ತು ಬ್ಯಾಟರ್‌ಗಳಿಗೆ ಸಮಾನ ಅವಕಾಶ ಒದಗಿಸುವ ನಿರೀಕ್ಷೆ ಇದೆ. ಮೊದಲು ಬ್ಯಾಟಿಂಗ್ ಮಾಡುವ ತಂಡವು ದೊಡ್ಡ ಮೊತ್ತ ಗಳಿಸಲು ಉತ್ತಮ ಅವಕಾಶವಿದೆ. ಆಸ್ಟ್ರೇಲಿಯಾ ತಂಡವು ಈ ಅಂಗಳದಲ್ಲಿ ಇಲ್ಲಿಯವರೆಗೆ ಹತ್ತು ಪಂದ್ಯಗಳನ್ನು ಆಡಿದೆ. ಅಲ್ಲದೇ ತಂಡದ ಪ್ರಮುಖ ಬಹುತೇಕ ಆಟಗಾರರು ಐಪಿಎಲ್‌ನಲ್ಲಿ ಆಡುವುದರಿಂದ ಪಿಚ್ ಮತ್ತು ಹವಾಗುಣದ ಪರಿಚಯವಿದೆ. ಅದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವೇಗಿ ಜೋಶ್ ಹ್ಯಾಜಲ್‌ವುಡ್ ಅವರು ತಂಡದಲ್ಲಿದ್ದಾರೆ. ಅವರನ್ನು ನೋಡಲೆಂದೇ ಬಹಳಷ್ಟು ಅಭಿಮಾನಿಗಳು ಟಿಕೆಟ್ ಖರೀದಿಸಿದ್ದಾರೆ. ಆದರೆ ಪಾಕಿಸ್ತಾನದ ಬಹುತೇಕ ಆಟಗಾರರಿಗೆ ಅಂತಹ ಹಿನ್ನೆಲೆ ಇಲ್ಲ. ಆದ್ದರಿಂದ ತಂಡದ ಮುಂದೆ ಕಠಿಣ ಸವಾಲಿದೆ. ಆಸ್ಟ್ರೇಲಿಯಾ ತಂಡವು ಈ ಟೂರ್ನಿಯಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ಎರಡು ಸೋತು ಒಂದರಲ್ಲಿ ಗೆದ್ದಿದೆ. ಐದು ಬಾರಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಈ ಸಲ ಸೆಮಿಫೈನಲ್ ತಲುಪಬೇಕಾದರೆ, ಇನ್ನುಳಿದಿರುವ ಆರು ಪಂದ್ಯಗಳಲ್ಲಿ ಹೆಚ್ಚು ಗೆಲುವುಗಳನ್ನು ಸಾಧಿಸುವುದು ಅನಿವಾರ್ಯ. ತಂಡಗಳು ಪಾಕಿಸ್ತಾನ: ಬಾಬರ್ ಆಜಂ (ನಾಯಕ) ಅಬ್ದುಲ್ಲಾ ಶಫೀಕ್ ಇಮಾಮ್ ಉಲ್ ಹಕ್ ಮೊಹಮ್ಮದ್ ರಿಜ್ವಾನ್ (ವಿಕೆಟ್‌ಕೀಪರ್) ಸೌದ್ ಶಕೀಲ್ ಇಫ್ತಿಕಾರ್ ಅಹಮದ್ ಶಾದಾಬ್ ಖಾನ್ ಉಸಾಮ ಮೀರ್ ಮೊಹಮ್ಮದ್ ನವಾಜ್ ಹಸನ್ ಅಲಿ ಶಹೀನ್ ಆಫ್ರಿದಿ ಹ್ಯಾರಿಸ್ ರವೂಫ್‌ ಮೊಹಮ್ಮದ್ ಹ್ಯಾರಿಸ್. ಆಸ್ಟ್ರೇಲಿಯಾ: ಪ್ಯಾಟ್ ಕಮಿನ್ಸ್ (ನಾಯಕ) ಮಿಚೆಲ್ ಮಾರ್ಷ್ ಡೇವಿಡ್ ವಾರ್ನರ್ ಸ್ಟೀವ್ ಸ್ಮಿತ್ ಮಾರ್ನಸ್ ಲಾಬುಷೇನ್ ಗ್ಲೆನ್ ಮ್ಯಾಕ್ಸ್‌ವೆಲ್ ಜೋಷ್ ಇಂಗ್ಲಿಸ್ (ವಿಕೆಟ್‌ಕೀಪರ್) ಮಾರ್ಕಸ್ ಸ್ಟೊಯಿನಿಸ್ ಮಿಚೆಲ್ ಸ್ಟಾರ್ಕ್ ಆ್ಯಡಂ ಜಂಪಾ ಜೋಷ್ ಹ್ಯಾಜಲ್‌ವುಡ್. ಪಂದ್ಯ ಆರಂಭ: ಮಧ್ಯಾಹ್ನ 2 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಹಾಟ್‌ಸ್ಟಾರ್ ಆ್ಯಪ್ ಚಿನ್ನಸ್ವಾಮಿ ಅಂಗಳದಲ್ಲಿ ಆಸ್ಟ್ರೇಲಿಯಾ ವಿಶೇಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದ 12 ವರ್ಷಗಳಲ್ಲಿ ಐದು ಅಂತರರಾಷ್ಟ್ರೀಯ ಏಕದಿನ ಪಂದ್ಯಗಳು ನಡೆದಿವೆ. ಈ ಎಲ್ಲ ಪಂದ್ಯಗಳಲ್ಲಿಯೂ ಆಸ್ಟ್ರೇಲಿಯಾ ಆಡಿರುವುದು ವಿಶೇಷ. ಇದರಲ್ಲಿ ಮೂರು ಗೆದ್ದು ಎರಡರಲ್ಲಿ ಸೋತಿದೆ. ಎರಡು ಬಾರಿ ಭಾರತವನ್ನು ಎದುರಿಸಿದರೆ ಕೆನ್ಯಾ ಹಾಗೂ ಕೆನಡಾ ವಿರುದ್ಧ ತಲಾ ಒಂದು ಪಂದ್ಯ ಅಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.