ವಿಶ್ವಕಪ್‌ನಲ್ಲಿ ಅಧಿಕ ವಿಕೆಟ್: ಪಾಕ್ ವೇಗಿ ಅಕ್ರಂ ದಾಖಲೆ ಸರಿಗಟ್ಟಿದ ಸ್ಟಾರ್ಕ್ ಬೆಂಗಳೂರು: ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಮಿಚೆಲ್ ಸ್ಟಾರ್ಕ್‌ ಅವರು ಏಕದಿನ ವಿಶ್ವಕಪ್‌ ಪಂದ್ಯಗಳಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನದ ದಿಗ್ಗಜ ವೇಗಿ ವಾಸಿಂ ಅಕ್ರಂ ದಾಖಲೆ ಸರಿಗಟ್ಟಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ 1 ವಿಕೆಟ್‌ ಪಡೆಯುವುದರೊಂದಿಗೆ ಅವರು ಈ ಸಾಧನೆ ಮಾಡಿದ್ದಾರೆ. ಈ ಪಂದ್ಯವನ್ನು ಆಸ್ಟ್ರೇಲಿಯಾ 62 ರನ್‌ ಅಂತರದಿಂದ ಜಯಿಸತು. ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ, ಡೇವಿಡ್‌ ವಾರ್ನರ್ ಹಾಗೂ ಮಿಚೆಲ್ ಮಾರ್ಷ್‌ ಗಳಿಸಿದ ಅಮೋಘ ಶತಕಗಳ ಬಲದಿಂದ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 367 ರನ್ ಕಲೆಹಾಕಿತು. ಗುರಿ ಬೆನ್ನತ್ತಿದ ಪಾಕಿಸ್ತಾನ 45.3 ಓವರ್‌ಗಳಲ್ಲಿ 305 ರನ್ ಗಳಿಸಿ ಆಲೌಟ್‌ ಆಯಿತು. ಸ್ಟಾರ್ಕ್‌ ಸಾಧನೆ ಏಕದಿನ ವಿಶ್ವಕಪ್‌ ಟೂರ್ನಿಗಳಲ್ಲಿ ಇದುವರೆಗೆ 22 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಸ್ಟಾರ್ಕ್‌ 4.80ರ ಸರಾಸರಿಯಲ್ಲಿ ರನ್‌ ಬಿಟ್ಟುಕೊಟ್ಟು 55 ವಿಕೆಟ್‌ ಕಬಳಿಸಿದ್ದಾರೆ. ಆ ಮೂಲಕ ವಿಶ್ವಕಪ್‌ನಲ್ಲಿ ಅಧಿಕ ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ವಾಸಿಂ ಅಕ್ರಂ ಅವರೊಂದಿಗೆ ನಾಲ್ಕನೇ ಸ್ಥಾನ ಹಂಚಿಕೊಂಡಿದ್ದಾರೆ. 38 ಪಂದ್ಯಗಳಲ್ಲಿ ಪಾಕ್‌ ತಂಡವನ್ನು ಪ್ರತಿನಿಧಿಸಿರುವ ವಾಸಿಂ ಅಕ್ರಂ ಕೂಡ ಸ್ಟಾರ್ಕ್‌ ಅವರಷ್ಟೇ ವಿಕೆಟ್‌ ಪಡೆದಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಗ್ಲೆನ್‌ ಮೆಗ್ರಾ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಅವರು 39 ಪಂದ್ಯಗಳಲ್ಲಿ 71 ವಿಕೆಟ್‌ ಉರುಳಿಸಿದ್ದಾರೆ. ಶ್ರೀಲಂಕಾದವರಾದ ಮುತ್ತಯ್ಯ ಮುರಳೀಧರನ್‌ (40 ಪಂದ್ಯ, 68 ವಿಕೆಟ್‌), ಲಸಿತ್‌ ಮಲಿಂಗ (29 ಪಂದ್ಯ, 56 ವಿಕೆಟ್‌), ಚಮಿಂದಾ ವಾಸ್‌ (31 ಪಂದ್ಯ, 49 ವಿಕೆಟ್‌) ಕ್ರಮವಾಗಿ ನಂತರದ ಮೂರು ಸ್ಥಾನದಲ್ಲಿದ್ದಾರೆ. ಭಾರತದ ಮಾಜಿ ವೇಗಿ ಜಹೀರ್‌ ಖಾನ್‌ 23 ಪಂದ್ಯಗಳಲ್ಲಿ 44 ವಿಕೆಟ್‌ ಉರುಳಿಸಿದ್ದು, ಭಾರತ ಪರ ಮೊದಲ ಸ್ಥಾನದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.