ದಕ್ಷಿಣ ಆಫ್ರಿಕಾ ಜಯಭೇರಿ; ಇಂಗ್ಲೆಂಡ್‌ಗೆ ಮುಖಭಂಗ- ಕ್ಲಾಸೆನ್, ಜಾನ್ಸೆನ್‌ ಬೀಸಾಟ ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಅಧಿಕಾರಯುತ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾ ತಂಡದವರು, ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ತಂಡವನ್ನು 229 ರನ್‌ಗಳಿಂದ ಬಗ್ಗುಬಡಿದರು. ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 399 ರನ್‌ ಕಲೆಹಾಕಿದರೆ, ಜೋಸ್‌ ಬಟ್ಲರ್‌ ಬಳಗ 22 ಓವರ್‌ಗಳಲ್ಲಿ 170 ರನ್‌ಗಳಿಗೆ ಆಲೌಟಾಯಿತು. ತನ್ನ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಅತಿದೊಡ್ಡ ಸೋಲು ಅನುಭವಿಸಿದ ಇಂಗ್ಲೆಂಡ್‌, ಪಾಯಿಂಟ್‌ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿತ ಕಂಡಿತು. ನಾಲ್ಕು ಪಂದ್ಯಗಳನ್ನು ಆಡಿರುವ ಜೋಸ್‌ ಬಟ್ಲರ್‌ ಬಳಗಕ್ಕೆ ಎದುರಾದ ಮೂರನೇ ಸೋಲು ಇದು. ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಬೇಕೆಂಬ ಇಂಗ್ಲೆಂಡ್‌ ತಂಡದ ಕನಸಿಗೆ ತೆಂಬಾ ಬವುಮಾ ಬಳಗ ಬಲವಾದ ಪೆಟ್ಟು ಕೊಟ್ಟಿತು. ಬಿರುಸಿನ ಶತಕ ಗಳಿಸಿದ ಹೆನ್ರಿಕ್‌ ಕ್ಲಾಸೆನ್ (109; 67 ಎ., 4X12, 6X4), ಬೀಸಾಟದ ಮೂಲಕ ಅಜೇಯ ಅರ್ಧಶತಕ ದಾಖಲಿಸಿದ ಮಾರ್ಕೊ ಜಾನ್ಸೆನ್ (ಔಟಾಗದೆ 75; 42 ಎ., 4X3, 6X6) ಹಾಗೂ ಶಿಸ್ತಿನ ದಾಳಿ ನಡೆಸಿದ ಬೌಲರ್‌ಗಳು ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ ಕಾರಣರಾದರು. ರೀಜಾ ಹೆಂಡ್ರಿಕ್ಸ್‌ (85; 75 ಎ., 4X9, 6X3) ಹಾಗೂ ರಸಿ ವ್ಯಾನ್‌ ಡೆರ್‌ ಡಸೆ (60; 61ಎ., 4X8) ಅವರೂ ಉಪಯುಕ್ತ ಕೊಡುಗೆ ನೀಡಿದರು. ಎದುರಾಳಿ ನೀಡಿದ ದೊಡ್ಡ ಗುರಿಯನ್ನು ನೋಡಿಯೇ ಅರ್ಧ ಸೋತುಹೋಗಿದ್ದ ಇಂಗ್ಲೆಂಡ್‌, ಕೇವಲ 22 ಓವರ್‌ಗಳಲ್ಲಿ ಸರ್ವಪತನ ಕಂಡಿತು. ಗಾಯಗೊಂಡಿದ್ದ ರೀಸ್‌ ಟೋಪ್ಲಿ ಅವರು ಬ್ಯಾಟ್‌ ಮಾಡಲಿಲ್ಲ. ಮೂರನೇ ಓವರ್‌ನಲ್ಲಿ ಜಾನಿ ಬೆಸ್ಟೋ (10) ಅವರನ್ನು ಔಟ್‌ ಮಾಡಿದ ಲುಂಗಿ ಗಿಡಿ, ವಿಕೆಟ್‌ ಬೇಟೆಗೆ ಚಾಲನೆ ನೀಡಿದರು. ಬ್ಯಾಟಿಂಗ್‌ನಲ್ಲಿ ಆರ್ಭಟಿಸಿದ್ದ ಜಾನ್ಸೆನ್‌ (35ಕ್ಕೆ 2) ಬೌಲಿಂಗ್‌ನಲ್ಲೂ ಸಾಮರ್ಥ್ಯ ತೋರಿ ಡೇವಿಡ್ ಮಲಾನ್‌ (6) ಹಾಗೂ ಜೋ ರೂಟ್‌ (2) ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. 38 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಾಗಲೇ ಇಂಗ್ಲೆಂಡ್‌, ಗೆಲುವಿನ ಆಸೆ ಕೈಬಿಟ್ಟಿತು. ಮಧ್ಯಮ ಕ್ರಮಾಂಕಕ್ಕೆ ಪೆಟ್ಟು ನೀಡಿದ ಜೆರಾಲ್ಡ್‌ ಕೊಯೆಟ್ಜಿ (35ಕ್ಕೆ 3) ಅವರು ಹ್ಯಾರಿ ಬ್ರೂಕ್‌, ಬಟ್ಲರ್‌ ಮತ್ತು ಆದಿಲ್‌ ರಶೀದ್‌ ವಿಕೆಟ್‌ ಪಡೆದರು. ಮಾರ್ಕ್‌ ವುಡ್‌ (ಅಜೇಯ 43; 17 ಎ., 4X2, 6X) ಮತ್ತು ಗಸ್‌ ಅಟ್ಕಿನ್ಸನ್‌ (35; 21 ಎ.) ಅವರು 9ನೇ ವಿಕೆಟ್‌ಗೆ 70 ರನ್‌ ಸೇರಿಸದೇ ಇರುತ್ತಿದ್ದರೆ, ಇಂಗ್ಲೆಂಡ್‌ ಸೋಲಿನ ಅಂತರ ಇನ್ನಷ್ಟು ಹೆಚ್ಚುತ್ತಿತ್ತು. 77 ಎಸೆತಗಳಲ್ಲಿ 151 ರನ್‌ ಜತೆಯಾಟ: ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳು ಇಂಗ್ಲೆಂಡ್‌ನ ಎಲ್ಲ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. ಕ್ವಿಂಟನ್‌ ಡಿ ಕಾಕ್‌ (4) ವಿಫಲರಾದರೂ, ರೀಜಾ ಮತ್ತು ಡಸೆ ಎರಡನೇ ವಿಕೆಟ್‌ಗೆ 121 ರನ್‌ ಸೇರಿಸಿ ಆಸರೆಯಾದರು. ಏಡನ್‌ ಮರ್ಕರಮ್‌ (42) ಕೂಡಾ ರನ್‌ ರೇಟ್‌ 7ರ ಆಸುಪಾಸು ಇರುವಂತೆ ನೋಡಿಕೊಂಡರು. ಕ್ಲಾಸೆನ್‌ ಮತ್ತು ಜಾನ್ಸೆನ್‌ ಜತೆಗೂಡಿದ ಬಳಿಕ ವಾಂಖೆಡೆಯಲ್ಲಿ ಸಿಕ್ಸರ್‌, ಬೌಂಡರಿಗಳ ಮಳೆ ಸುರಿಯಿತು. ಇವರು 6ನೇ ವಿಕೆಟ್‌ಗೆ 77 ಎಸೆತಗಳಲ್ಲಿ 151 ರನ್‌ ಕಲೆಹಾಕಿದರು. ಕೊನೆಯ 10 ಓವರ್‌ಗಳಲ್ಲಿ 143 ರನ್‌ಗಳು ಬಂದವು. ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 399 (ರೀಜಾ ಹೆಂಡ್ರಿಕ್ಸ್‌ 85, ರಸಿ ವ್ಯಾನ್‌ ಡೆರ್‌ ಡಸೆ 60, ಏಡನ್‌ ಮರ್ಕರಮ್ 42, ಹೆನ್ರಿಕ್‌ ಕ್ಲಾಸೆನ್‌ 109, ಮಾರ್ಕೊ ಜಾನ್ಸೆನ್‌ ಔಟಾಗದೆ 75, ರೀಸ್‌ ಟೋಪ್ಲಿ 88ಕ್ಕೆ 3) ಇಂಗ್ಲೆಂಡ್‌ 22 ಓವರ್‌ಗಳಲ್ಲಿ 170 (ಹ್ಯಾರಿ ಬ್ರೂಕ್‌ 17, ಜೋಸ್‌ ಬಟ್ಲರ್‌ 15, ಡೇವಿಡ್‌ ವಿಲಿ 12, ಗಸ್‌ ಅಟ್ಕಿನ್ಸನ್‌ 35, ಮಾರ್ಕ್‌ ವುಡ್‌ 43, ಜೆರಾಲ್ಡ್‌ ಕೊಯೆಟ್ಜಿ 35ಕ್ಕೆ 3, ಲುಂಗಿ ಗಿಡಿ 26ಕ್ಕೆ 2, ಮಾರ್ಕೊ ಜಾನ್ಸೆನ್‌ 35ಕ್ಕೆ 2) ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 229 ರನ್‌ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.