2023 | ಗೆಲುವಿನ ಖಾತೆ ತೆರೆದ ಲಂಕಾ ಲಖನೌ: ಸದೀರ ಸಮರವಿಕ್ರಮ ಅವರ ಅಜೇಯ 91 ರನ್‌ಗಳ ನೆರವಿನಿಂದ ಶ್ರೀಲಂಕಾ ತಂಡ, ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಿತು. ಏಕನಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಕುಶಾಲ್‌ ಮೆಂಡಿಸ್‌ ಬಳಗ ಐದು ವಿಕೆಟ್‌ಗಳಿಂದ ನೆದರ್ಲೆಂಡ್ಸ್‌ ತಂಡವನ್ನು ಮಣಿಸಿತು. ತನ್ನ ಹಿಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಆಘಾತ ನೀಡಿದ್ದ ಡಚ್‌ ತಂಡ, ಲಖನೌದ ಅತಿಯಾದ ಸೆಕೆಯಲ್ಲಿ ಲಂಕಾ ಒಡ್ಡಿದ ಸವಾಲು ಬದಿಗೊತ್ತಲು ವಿಫಲವಾಯಿತು. ಮೊದಲು ಬ್ಯಾಟ್‌ ಮಾಡಿದ ನೆದರ್ಲೆಂಡ್ಸ್‌ ತಂಡ ದಕ್ಷಿಣ ಆಫ್ರಿಕಾ ಮೂಲದ ಸೈಬ್ರಾಂಡ್‌ ಇಂಗೆಲ್‌ಬ್ರೆಕ್ಟ್‌ (70; 82 ಎ) ಮತ್ತು ಲೋಗನ್ ವಾನ್‌ ಬೀಕ್‌ (59; 75 ಎ.) ಅವರ ಅರ್ಧಶತಕಗಳ ನೆರವಿನಿಂದ 49.4 ಓವರ್‌ಗಳಲ್ಲಿ 262 ರನ್‌ ಗಳಿಸಿತು. ಸಾಧಾರಣ ಗುರಿ ಬೆನ್ನಟ್ಟಿದ ಲಂಕಾ ತಂಡಕ್ಕೆ ಆರ್ಯನ್‌ ದತ್‌ (44ಕ್ಕೆ 3) ಅವರು ಆರಂಭಿಕ ಆಘಾತ ನೀಡಿದರು. ಕುಶಾಲ್‌ ಪೆರೆರಾ (5) ಮತ್ತು ನಾಯಕ ಮೆಂಡಿಸ್‌ (8) ಅವರನ್ನು ‘ಪವರ್‌ ಪ್ಲೇ’ ಅವಧಿಯೊಳಗೆ ದತ್ ಪೆವಿಲಿಯನ್‌ಗಟ್ಟಿದರು. ಆ ಬಳಿಕ ಲಯ ಕಂಡುಕೊಂಡ ಲಂಕಾ ಬ್ಯಾಟರ್‌ಗಳು, ಒತ್ತಡಕ್ಕೆ ಒಳಗಾಗದೆ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಿದ್ದ ಸದೀರ, ಮಧ್ಯಮ ಕ್ರಮಾಂಕದಲ್ಲಿ ಸೊಗಸಾದ ಆಟವಾಡಿದರು. ಆರಂಭಿಕ ಬ್ಯಾಟರ್‌ ಪಥುಮ್‌ ನಿಸಾಂಕ (54; 52 ಎ., 4X9) ಸತತ ಮೂರನೇ ಅರ್ಧಶತಕದ ಮೂಲಕ ಆಸರೆಯಾದರು. ಇವರಿಬ್ಬರು ಮೂರನೇ ವಿಕೆಟ್‌ಗೆ 52 ರನ್‌ ಸೇರಿಸಿದರು. ನಿಸಾಂಕ ಔಟಾದ ಬಳಿಕ ಬಂದ ಚರಿತ್‌ ಅಸಲಂಕ (44; 66 ಎ., 4X2, 6X1) ಅವರು ತಾಳ್ಮೆಯಿಂದ ಬ್ಯಾಟ್‌ ಮಾಡಿದರಲ್ಲದೆ, ಸದೀರ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 77 ರನ್‌ ಸೇರಿಸಿದರು. ಆರ್ಯನ್‌ ಹೊರತುಪಡಿಸಿ, ನೆದರ್ಲೆಂಡ್ಸ್‌ ತಂಡದ ಇತರ ಬೌಲರ್‌ಗಳು ಪರಿಣಾಮಕಾರಿ ಎನಿಸಲಿಲ್ಲ. ಅಸಲಂಕ ಔಟಾಗುವ ವೇಳೆ ಲಂಕಾ ಗೆಲುವಿಗೆ 104 ಎಸೆತಗಳಲ್ಲಿ 82 ರನ್‌ಗಳು ಬೇಕಿದ್ದವು. ಸದೀರ ಆ ಬಳಿಕ ಧನಂಜಯ ಡಿಸಿಲ್ವಾ (30; 37 ಎ., 4X1, 6X2) ಅವರೊಂದಿಗೆ ಐದನೇ ವಿಕೆಟ್‌ಗೆ 76 ರನ್‌ಗಳನ್ನು ಸೇರಿಸಿ ಗೆಲುವಿನ ಹಾದಿ ಸುಗಮಗೊಳಿಸಿದರು. 107 ಎಸೆತಗಳನ್ನು ಎದುರಿಸಿದ ಸದೀರ ಏಳು ಬೌಂಡರಿ ಹೊಡೆದರು. ಮಿಂಚಿದ ರಜಿತ, ಮದುಶಂಕ ಇದಕ್ಕೂ ಮುನ್ನ ಮೊದಲ ಗೆಲುವಿನ ನಿರೀಕ್ಷೆಯೊಂದಿಗೆ ಕಣಕ್ಕಿಳಿದ ಲಂಕಾ ತಂಡ, ದಿಲ್ಶಾನ್‌ ಮದುಶಂಕ (49ಕ್ಕೆ 4) ಮತ್ತು ಕಸುನ್ ರಜಿತ (50ಕ್ಕೆ 4) ಅವರ ಪ್ರಭಾವಿ ಬೌಲಿಂಗ್‌ ನೆರವಿನಿಂದ ಎದುರಾಳಿ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿತು. 91 ರನ್‌ ಗಳಿಸುವಷ್ಟರಲ್ಲಿ ಆರು ವಿಕೆಟ್‌ ಕಳೆದುಕೊಂಡ ಸ್ಕಾಟ್‌ ಎಡ್ವರ್ಡ್ಸ್‌ ಬಳಗ ಅಲ್ಪ ಮೊತ್ತಕ್ಕೆ ಕುಸಿಯುವ ಆತಂಕ ಎದುರಿಸಿತ್ತು. ಆದರೆ ಏಳನೇ ವಿಕೆಟ್‌ಗೆ ಜತೆಯಾದ ಇಂಗೆಲ್‌ಬ್ರೆಕ್ಟ್‌ ಮತ್ತು ವಾನ್‌ ಬೀಕ್‌ ಅವರು ಛಲದ ಆಟವಾಡಿದ್ದರಿಂದ ಸ್ಕೋರ್‌ 250ರ ಗಡಿ ದಾಟಿತು. ಸಂಕ್ಷಿಪ್ತ ಸ್ಕೋರ್ ನೆದರ್ಲೆಂಡ್ಸ್‌ 49.4 ಓವರ್‌ಗಳಲ್ಲಿ 262 (ಮ್ಯಾಕ್ಸ್‌ ಒಡೌಡ್‌ 16, ಕಾಲಿನ್ ಆ್ಯಕ್ರಮನ್ 29, ಸ್ಕಾಟ್‌ ಎಡ್ವರ್ಡ್ಸ್‌ 16, ಸೈಬ್ರಾಂಡ್‌ ಇಂಗೆಲ್‌ಬ್ರೆಕ್ಟ್‌ 70, ಲೋಗನ್ ವಾನ್‌ ಬೀಕ್‌ 59, ದಿಲ್ಶಾನ್‌ ಮದುಶಂಕ 49ಕ್ಕೆ 4, ಕಸುನ್ ರಜಿತ 50ಕ್ಕೆ 4) ಶ್ರೀಲಂಕಾ 48.2 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 263 (ಪಥುಮ್‌ ನಿಸಾಂಕ 54, ಸದೀರ ಸಮರವಿಕ್ರಮ ಔಟಾಗದೆ 91, ಚರಿತ್‌ ಅಸಲಂಕಾ 44, ಧನಂಜಯ ಡಿಸಿಲ್ವಾ 30, ಆರ್ಯನ್‌ ದತ್‌ 44ಕ್ಕೆ 3, ಪಾಲ್ ವಾನ್ ಮೀಕೆರೆನ್ 39ಕ್ಕೆ 1) ಫಲಿತಾಂಶ: ಶ್ರೀಲಂಕಾಕ್ಕೆ 5 ವಿಕೆಟ್‌ ಗೆಲುವು ದಾಖಲೆ ಜತೆಯಾಟ ನೆದರ್ಲೆಂಡ್ಸ್‌ ತಂಡದ ಸೈಬ್ರಾಂಡ್‌ ಇಂಗೆಲ್‌ಬ್ರೆಕ್ಟ್‌ ಮತ್ತು ಲೋಗನ್ ವಾನ್‌ ಬೀಕ್‌ ಅವರು ಸೇರಿಸಿದ 130 ರನ್‌ಗಳು ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಏಳನೇ ವಿಕೆಟ್‌ಗೆ ದಾಖಲಾದ ಅತಿದೊಡ್ಡ ಜತೆಯಾಟ ಎನಿಸಿತು. ಭಾರತದ ಕಪಿಲ್‌ದೇವ್‌ ಮತ್ತು ಸೈಯದ್‌ ಕಿರ್ಮಾನಿ ಅವರು 1983ರ ಟೂರ್ನಿಯಲ್ಲಿ ಜಿಂಬಾಬ್ವೆ ವಿರುದ್ಧ ಏಳನೇ ವಿಕೆಟ್‌ಗೆ 126 ರನ್‌ಗಳನ್ನು ಸೇರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.