ಸೂರ್ಯಕುಮಾರ್ ತೋಳಿಗೆ ಗಾಯ; ಇಶಾನ್‌ಗೆ ಕಚ್ಚಿದ ಜೇನ್ನೊಣ ಧರ್ಮಶಾಲಾ: ನ್ಯೂಜಿಲೆಂಡ್‌ ವಿರುದ್ಧ ಭಾನುವಾರ ಹಾಲಿ ವಿಶ್ವಕಪ್‌ನ ಮೊದಲ ಪಂದ್ಯ ಆಡುವ ನಿರೀಕ್ಷೆಯಲ್ಲಿದ್ದ ಭಾರತ ತಂಡದ ಪ್ರಮುಖ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರಿಗೆ ಶನಿವಾರ ನೆಟ್‌ ಪ್ರಾಕ್ಟೀಸ್‌ ವೇಳೆ ಬಲ ತೋಳಿಗೆ ಬಲವಾದ ಪೆಟ್ಟುಬಿದ್ದಿದೆ. ಪ್ರಾಕ್ಟೀಸ್ ವೇಳೆ ಥ್ರೊಡೌನ್‌ ಪರಿಣತ ರಾಘವೇಂದ್ರ ಅವರ ಶರವೇಗದ ಎಸೆತದಲ್ಲಿ ಚೆಂಡು ಮಣಿಗಂಟಿನ ಸ್ವಲ್ಪ ಮೇಲೆ ಬಡಿದಿದೆ. ಅವರು ಅತೀವ ನೋವಿನಿಂದ ನರಳಿ ತಕ್ಷಣ ನೆಟ್ಸ್‌ನಿಂದ ನಿರ್ಗಮಿಸಿದರು. ಅವರು ಭಾನುವಾರದ ಪಂದ್ಯಕ್ಕೆ ಲಭ್ಯರಿರುವ ಬಗ್ಗೆ ಸ್ಪಷ್ಟತೆಯಿಲ್ಲ. ಅವರಿಗೆ ಸಮಸ್ಯೆಯಾಗಿಲ್ಲ ಎಂದು ತಂಡದ ಮೂಲಗಳು ತಿಳಿಸಿವೆ. ಅವರಿಗೆ ಐಸ್‌ ಪ್ಯಾಕ್‌ಗಳ ಮೂಲಕ ತಕ್ಷಣಕ್ಕೆ ನೋವುಶಮನದ ಪ್ರಕ್ರಿಯೆ ನಡೆಸಲಾಗಿದೆ. ಇದು ಸಾಲದು ಎಂಬಂತೆ, ತಾಲೀಮಿನ ವೇಳೆ ಎಡಗೈ ಬ್ಯಾಟರ್‌– ವಿಕೆಟ್‌ ಕೀಪರ್ ಇಶಾನ್ ಕಿಶನ್ ಅವರ ಕುತ್ತಿಗೆಗೆ ಜೇನ್ನೊಣ ಕಚ್ಚಿದೆ. ಈ ಆಕಸ್ಮಿಕಕ್ಕೆ ಮೊದಲು ಅವರು ಸಾಕಷ್ಟು ಸಮಯ ಬ್ಯಾಟ್‌ ಮಾಡಿದ್ದರು. ಜೇನ್ನೊಣ ಕಚ್ಚಿದ ತೀವ್ರತೆಗೆ ಅವರು ಕ್ಷಣಕಾಲ ಹೌಹಾರಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.