ಬಿಷನ್ ಸಿಂಗ್ ಬೇಡಿ ಸಕಲ ಕಲೆ ಬಲ್ಲವರು- ಕೀರ್ತಿ ಆಜಾದ್ ನವದೆಹಲಿ (ಪಿಟಿಐ): ಬಿಷನ್ ಸಿಂಗ್ ಬೇಡಿ ಅವರು ಸಕಲ ಕಲೆಗಳನ್ನು ಬಲ್ಲವರಾಗಿದ್ದರು. ಅವರೊಬ್ಬ ಅದ್ಭುತ ವ್ಯಕ್ತಿಯಾಗಿ ಅಮರರಾಗಿದ್ದಾರೆ ಎಂದು 1983ರ ವಿಶ್ವಕಪ್ ವಿಜೇತ ಭಾರತ ತಂಡದಲ್ಲಿ ಆಡಿದ್ದ ಕೀರ್ತಿ ಆಜಾದ್ ಹೇಳಿದರು. ಶುಕ್ರವಾರ ಇಲ್ಲಿ ಬೇಡಿ ಅವರ ಗೌರವಾರ್ಥ ಏರ್ಪಡಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಕೀರ್ತಿ ಮಾತನಾಡಿದರು. ಭಾರತ ತಂಡದ ಮಾಜಿ ನಾಯಕ ಮತ್ತು ಸ್ಪಿನ್ ದಿಗ್ಗಜ ಬೇಡಿ ಅಕ್ಟೋಬರ್ 23ರಂದು ನಿಧನರಾಗಿದ್ದರು. ಅವರಿಗೆ 77 ವರ್ಷವಾಗಿತ್ತು. ‘ರಾಮನಿಗೆ 12 ಕಲಾಪ್ರಕಾರಗಳು ಮತ್ತು ಶ್ರೀಕೃಷ್ಣನಿಗೆ 16 ಕಲೆಗಳು ಒಲಿದಿದ್ದವಂತೆ. ಆದರೆ ಬಿಷನ್ ಸಿಂಗ್ ಬೇಡಿಯವರಿಗೆ ಎಲ್ಲ ಕಲೆಗಳೂ ಕರಗತವಾಗಿದ್ದವು. ಅಪಾರ ಜ್ಞಾನ ಅವರಿಗೆ ಇತ್ತು. ನಾನು ಅವರ ಕ್ರಿಕೆಟ್‌ ಕುರಿತು ಹೆಚ್ಚು ಹೇಳಬೇಕಿಲ್ಲ. ಅದನ್ನು ಮೀರಿ ಅವರು ಒಬ್ಬ ಪರಿಪೂರ್ಣ ವ್ಯಕ್ತಿಯಾಗಿದ್ದರು. ನಮಲ್ಲಿ ಹೋರಾಟದ ಮನೋಭಾವ ಜಾಗೃತಗೊಳಿಸಿದ್ದರು’ ಎಂದು ಕೀರ್ತಿ ಸ್ಮರಿಸಿದರು. ಇದೇ ಸಂದರ್ಭದಲ್ಲಿ ಹಾಜರಿದ್ದ ಮದನ್ ಲಾಲ್, ‘ಅವರು ನನ್ನ ಉಸ್ತಾದ, ಗುರು ಮತ್ತು ಮಹಾಪೋಷಕ. ಬೇಡಿ ಮತ್ತು ನಾನು ಅಮೃತಸರದಿಂದ ಬಂದವರು. ನನ್ನ ಭವಿಷ್ಯ ರೂಪಿಸಿದವರು ಅವರು. ಅವರು ಕ್ರಿಕೆಟ್‌ನ ದಂತಕಥೆಯಾಗಿದ್ದರು. ಅವರ ಅಗಲಿಕೆಯಿಂದ ದೊಡ್ಡ ನಷ್ಟವಾಗಿದೆ‘ ಎಂದರು. ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆ ಶರ್ಮಿಳಾ ಟ್ಯಾಗೋರ್, ಬೇಡಿಯವರ ಪತ್ನಿ ಅಂಜು ಬೇಡಿ, ಮಗ ಅಂಗದ್ ಬೇಡಿ ಹಾಗೂ ಅವರ ಪತ್ನಿ, ನಟಿ ನೇಹಾ ದೂಪಿಯಾ, ಕ್ರಿಕೆಟಿಗ ಮುರಳಿ ಕಾರ್ತಿಕ್ ಕೂಡ ಹಾಜರಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.