ಸೆಮಿಫೈನಲ್‌ನಲ್ಲಿ ರನೌಟ್ ಆದಾಗಲೇ ನಿವೃತ್ತಿಯಾದೆ: ಮಹೇಂದ್ರಸಿಂಗ್ ಧೋನಿ ಮುಂಬೈ (ಪಿಟಿಐ): ನಾಲ್ಕು ವರ್ಷಗಳ ಹಿಂದೆ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಕ್ರಿಕೆಟ್ ತಂಡವು ಅನುಭವಿಸಿದ್ದ ಆಘಾತವನ್ನು ಕ್ರಿಕೆಟ್ ಪ್ರೇಮಿಗಳೂ ಮರೆಯಲು ಸಾಧ್ಯವೇ ಇಲ್ಲ. ಆ ಪಂದ್ಯದಲ್ಲಿ ರನೌಟ್ ಆಗುವುದರ ಜೊತೆಗೆ ತಂಡ ಸೋಲಿನೆಡೆಗೆ ಜಾರಿತ್ತು. ಹನಿಗೂಡಿದ್ದ ಕಂಗಳೊಂದಿಗೆ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ್ದ ಧೋನಿ ಅಂದೇ ಅಂತರರಾಷ್ಟ್ರೀಯ ಕ್ರಿಕೆಟ್‌ ನಿವೃತ್ತಿಯಾಗುವ ನಿರ್ಧಾರ ತೆಗೆದುಕೊಂಡಿದ್ದರಂತೆ. ಆದ್ದರಿಂದಲೇ ಅವರು ಅದರ ನಂತರ ಯಾವುದೇ ಪಂದ್ಯದಲ್ಲ ಆಡಲಿಲ್ಲ. ಈ ಕುರಿತು ಅವರು ಈಚೆಗೆ ಬೆಂಗಳೂರಿನಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ‘ರನೌಟ್‌ ಆಗಿ ಡ್ರೆಸಿಂಗ್‌ ಕೋಣೆಗೆ ತೆರಳುವಷ್ಟರಲ್ಲಿಯೇ ನನ್ನ ನಿವೃತ್ತಿಯ ನಿರ್ಧಾರ ಮನದಲ್ಲಿ ಗಟ್ಟಿಯಾಗಿತ್ತು. ಇವತ್ತು ಭಾರತ ತಂಡದಲ್ಲಿ ನನ್ನ ಕೊನೆಯ ದಿನವೆಂದು ತೀರ್ಮಾನಿಸಿದ್ದೆ. ಅದಾಗಿ ಒಂದು ವರ್ಷದ ನಂತರ ನಿವೃತ್ತಿ ಪ್ರಕಟಿಸಿದ್ದೆ‘ ಎಂದು ಧೋನಿ ಹೇಳಿದ್ದಾರೆ. ‘ನಿಕಟ ಪೈಪೋಟಿಯ ಪಂದ್ಯಗಳಲ್ಲಿ ಆಡುವಾಗ ನಮ್ಮ ಭಾವನೆಗಳನ್ನು ನಿಯಂತ್ರಿಸುವುದು ಸುಲಭವಲ್ಲ. ಅದರಲ್ಲೂ ಅಂತಹ ಪಂದ್ಯಗಳನ್ನು ಸೋತಾಗ ಇನ್ನೂ ಕಷ್ಟ‘ ಎಂದಿದ್ದಾರೆ. ‘ಫಿಟ್‌ನೆಸ್ ನಿರ್ವಹಣೆಗಾಗಿ ನಮಗೆ ಕೆಲವು ಸಾಧನಗಳನ್ನು ನೀಡಲಾಗಿತ್ತು. ಪ್ರತಿಬಾರಿ ಟ್ರೇನರ್ ಬಳಿ ಹೋದಾಗಲೂ ಅವುಗಳನ್ನು ಮರಳಿಸಲು ಪ್ರಯತ್ನಿಸುತ್ತಿದ್ದೆ. ಆದರೆ ಅವರು ಬೇಡ ನಿಮ್ಮ ಬಳಿಯೇ ಇರಲಿ ಎನ್ನುತ್ತಿದ್ದರು. ನನಗೆ ಅವುಗಳ ಅಗತ್ಯವಿಲ್ಲ. ನಿವೃತ್ತಿಯಾಗುತ್ತಿರುವೆ ಎಂದು ಹೇಗೆ ಹೇಳುವುದೆಂದೆ ಅರ್ಥವಾಗುತ್ತಿರಲಿಲ್ಲ‘ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.