ಭಾರತ ಮಹಿಳಾ ತಂಡಕ್ಕೆ ಕೋಚ್ ಆಗಿ ಅಮೋಲ್ ಮಜುಂದಾರ್ ನವದೆಹಲಿ: ಮುಂಬೈ ತಂಡದ ಮಾಜಿ ನಾಯಕ ಅಮೋಲ್ ಮಜುಂದಾರ್ ಅವರನ್ನು ಭಾರತ ಮಹಿಳಾ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ಬುಧವಾರ ನೇಮಕ ಮಾಡಲಾಗಿದೆ. ದೀರ್ಘಕಾಲದಿಂದ ಈ ಹುದ್ದೆಗೆ ನೇಮಕ ಆಗಿರಲಿಲ್ಲ. ಸುಲಕ್ಷಣಾ ನಾಯಕ್, ಅಶೋಕ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರಿದ್ದ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ಕೆಲವು ತಿಂಗಳ ಹಿಂದೆ ಅಂತಿಮಗೊಳಿಸಿದ್ದ ಅಭ್ಯರ್ಥಿಗಳ ಸಂದರ್ಶನ ನಡೆಸಿತ್ತು. ಮಜುಂದಾರ್ ಅವರು ಮುಖ್ಯ ಕೋಚ್ ಹುದ್ದೆಗೆ ನೇಮಕಗೊಳ್ಳುವುದು ಖಚಿತವಾಗಿದ್ದರೂ, ನೇಮಕಕ್ಕೆ ಸ್ಥಿರೀಕರಣ ಪ್ರಕ್ರಿಯೆ ದೀರ್ಘ ಕಾಲ ತೆಗೆದುಕೊಂಡಿತು. ‘ದೀರ್ಘ ಸಮಾಲೋಚನೆಯ ನಂತರ ಮೂವರು ಸದಸ್ಯರ ಸಮಿತಿ ಅಮೋಲ್ ಅವರ ಹೆಸರನ್ನು ಈ ಹುದ್ದೆಗೆ ಸರ್ವಾನುಮತದಿಂದ ಶಿಫಾರಸು ಮಾಡಿದೆ’ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ. ಮಹಿಳಾ ತಂಡಕ್ಕೆ ಈ ಹಿಂದೆ ಕೋಚ್ ಆಗಿದ್ದ ರಮೇಶ್ ಪೊವಾರ್ ಅವರನ್ನು ಬೆಂಗಳೂರು ಕೇಂದ್ರಕ್ಕೆ ಸ್ಪಿನ್ ಕನ್ಸಲ್ಟೆಂಟ್ ಆಗಿ ನೇಮಕ ಮಾಡಿದ ನಂತರ, ಭಾರತ ತಂಡದ ಮಾಜಿ ಬ್ಯಾಟರ್ ಹಾಗೂ ಎನ್‌ಸಿಎ ಸಿಬ್ಬಂದಿ ಹೃಷಿಕೇಶ್ ಕಾನಿಟ್ಕರ್ ಅವರಿಗೆ ತಾತ್ಕಾಲಿಕ ನೆಲೆಯಲ್ಲಿ ಮಹಿಳಾ ತಂಡದ ಕೋಚ್ ಹೊಣೆಯನ್ನು ವಹಿಸಲಾಗಿತ್ತು. ಮಜುಂದಾರ್ ಅವರು ಸಿಎಸಿ ಮತ್ತು ಬಿಸಿಸಿಐಗೆ ಕೃತಜ್ಞತೆ ಸಲ್ಲಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಛಾಪು ಮೂಡಿಸಿರುವ ಮಜುಂದಾರ್‌ 21 ವರ್ಷಗಳ ಪ್ರಥಮ ದರ್ಜೆ ಕ್ರಿಕೆಟ್‌ ಜೀವನದಲ್ಲಿ 171 ಪಂದ್ಯಗಳನ್ನು ಆಡಿದ್ದು, 11,000ಕ್ಕೂ ಹೆಚ್ಚು ರನ್‌ ಗಳಿಸಿದ್ದಾರೆ. ಇವುಗಳಲ್ಲಿ 30 ಶತಕಗಳು ಇವೆ. ಮುಂಬೈ ತಂಡಕ್ಕೆ ರಣಜಿ ಟ್ರೋಫಿ ಗೆಲ್ಲಿಸಿಕೊಡುವಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ನಂತರ ಅವರು ಅಸ್ಸಾಂ ಮತ್ತು ಆಂಧ್ರ ತಂಡಕ್ಕೂ ಆಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.