2023: ಮ್ಯಾಕ್ಸ್‌ವೆಲ್‌ಗೆ ಗಾಯ, ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಅಲಭ್ಯ ಅಹಮದಾಬಾದ್: ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್‌ ಆಲ್‌ರೌಂಡರ್ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರು ಗಾಲ್ಫ್‌ ಕಾರ್ಟ್‌ನಿಂದ (ಗಾಲ್ಫ್‌ ಕೋರ್ಸ್‌ನಲ್ಲಿ ಬಳಸುವ ಬ್ಯಾಟರಿ ಚಾಲಿತ ವಾಹನ) ಬಿದ್ದು ತಲೆಗೆ ಪೆಟ್ಟಾಗಿದ್ದು, ನ.4 ರಂದು ನಡೆಯಲಿರುವ ಇಂಗ್ಲೆಂಡ್‌ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಬುಧವಾರ ಗಾಲ್ಫ್‌ ಆಡಿದ ಬಳಿಕ ಕ್ಲಬ್‌ಹೌಸ್‌ನಿಂದ ತಂಡದ ಬಸ್‌ನತ್ತ ಗಾಲ್ಫ್‌ ಕಾರ್ಟ್‌ನ ಹಿಂಬದಿಯಲ್ಲಿ ಸವಾರಿ ಮಾಡುತ್ತಿದ್ದಾಗ ಆಯತಪ್ಪಿ ಬಿದ್ದಿದ್ದಾರೆ. ತಲೆ ಹಾಗೂ ಮುಖಕ್ಕೆ ಗಾಯವಾಗಿದೆ. ತಲೆಗೆ ಪೆಟ್ಟಾಗಿರುವ ಕಾರಣ ಕಂಕಷನ್‌ ನಿಯಮದ ಪ್ರಕಾರ ಅವರು ಕೆಲದಿನಗಳ ಕಾಲ ವಿಶ್ರಾಂತಿ ಪಡೆಯಬೇಕಾಗುತ್ತದೆ. ‘ಕಂಕಷನ್‌ ಶಿಷ್ಟಾಚಾರ ಪಾಲಿಸಬೇಕಾಗಿರುವುದರಿಂದ ಇಂಗ್ಲೆಂಡ್‌ ವಿರುದ್ದದ ಪಂದ್ಯಕ್ಕೆ ಅವರು ಲಭ್ಯರಿಲ್ಲ’ ಎಂದು ಆಸ್ಟ್ರೇಲಿಯಾ ತಂಡದ ಕೋಚ್‌ ಆ್ಯಂಡ್ರ್ಯೂ ಮೆಕ್‌ಡೊನಾಲ್ಡ್‌ ಹೇಳಿದ್ದಾರೆ. ಮ್ಯಾಕ್ಸ್‌ವೆಲ್‌ ಅವರು ಒಂದು ವರ್ಷದ ಅವಧಿಯಲ್ಲಿ ಎರಡನೇ ಬಾರಿ ಈ ರೀತಿ ವಿಲಕ್ಷಣ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಗೆಳೆಯನ ಹುಟ್ಟುಹಬ್ಬ ಆಚರಣೆ ವೇಳೆ ಬಿದ್ದು ಕಾಲಿನ ಮೂಳೆ ಮುರಿದಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.