ಹುಬ್ಬಳ್ಳಿ | ಕ್ರಿಕೆಟ್ ಬೆಟ್ಟಿಂಗ್‌; ಮೂವರು ಬುಕ್ಕಿಗಳ ಬಂಧನ ಹುಬ್ಬಳ್ಳಿ: ಬುಧವಾರ ನಡೆದ ವಿಶ್ವಕಪ್ ಕ್ರಿಕೆಟ್‌ನ ದಕ್ಷಿಣಾ ಆಫ್ರಿಕಾ, ನ್ಯೂಜಿಲೆಂಡ್‌ ತಂಡಗಳ ನಡುವಿನ ಪಂದ್ಯದ ವೇಳೆ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಮೂವರು ಬುಕ್ಕಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಕಮರಿಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ತೊರವಿ ಹಕ್ಕಲ ಬಳಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ ₹61 ಸಾವಿರ ನಗದು, ₹15 ಸಾವಿರ ಮೌಲ್ಯದ ಮೊಬೈಲ್ ಸೇರಿದಂತೆ ₹76 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಮರಿಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೂಜಾಟ; ಏಳು ಜನರ ಬಂಧನ: ತಾಲ್ಲೂಕಿನ ಕಂಪ್ಲಿಕೊಪ್ಪ ಹಾಗೂ ಕಿರೇಸೂರ ಗ್ರಾಮಗಳಲ್ಲಿ ಜೂಜಾಟ ಅಡ್ಡೆಗಳ ಮೇಲೆ ದಾಳಿ ನಡೆಸಿದ ಗ್ರಾಮೀಣ ಠಾಣೆ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ. ಕಂಪ್ಲಿಕೊಪ್ಪ ಗ್ರಾಮದ ಕೆರೆ ಬಳಿ ಆರು ಜನ ಜೂಜಾಟದಲ್ಲಿ ತೊಡಗಿದ್ದರು. ಅವರಿಂದ ₹47,210 ಮತ್ತು ಕಿರೇಸೂರ ಗ್ರಾಮದಲ್ಲಿ ಒಬ್ಬನನ್ನು ಬಂಧಿಸಿ ₹5,150 ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ. ಗ್ರಾಮೀಣ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ಎಂ.ಆರ್. ಚನ್ನಣ್ಣವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ, ಪಿಎಸ್‌ಐಗಳಾದ ಸಚಿನ್ ಆಲಮೇಲಕರ, ಚಾಮುಂಡೇಶ್ವರಿ ಡಿ., ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.