ಅಸ್ಸಾಂ ಆಟಗಾರರ ಬಗ್ಗೆ ಅನುಚಿತ ಹೇಳಿಕೆ: ಕ್ಷಮೆ ಕೋರಿದ ಮಾಜಿ ಕ್ರಿಕೆಟಿಗ ಮೊಹಾಲಿ: ತಮ್ಮ ಕಾಲದ ಅಸ್ಸಾಂ ಆಟಗಾರರು ‘ಎರಡನೆ ದರ್ಜೆಯ ನಾಗರಿಕರು’ ಎಂದು ನೀಡಿದ್ದ ಹೇಳಿಕೆಗೆ ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಅಶೋಕ್ ಮಲ್ಹೋತ್ರಾ ಬುಧವಾರ ಕ್ಷಮೆ ಯಾಚಿಸಿದ್ದಾರೆ. ಬಂಗಾಳ ತಂಡ ಮಂಗಳವಾರ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಅಸ್ಸಾಂ ತಂಡದೆದುರು ಆಘಾತಕಾರಿ ಸೋಲು ಅನುಭವಿಸಿದ ನಂತರ ಈ ಹೇಳಿಕೆ ನೀಡಿದ್ದರು. ‘ನಾವು ಆಡುತ್ತಿದ್ದ ಕಾಲದಲ್ಲಿ ಅಸ್ಸಾಂ ತಂಡವನ್ನು ಎರಡನೆ ದರ್ಜೆ ನಾಗರಿಕರು ಎಂದು ಕರೆಯಲಾಗುತಿತ್ತು’ ಎಂದು ಅವರು ಹೇಳಿದ್ದರು. ಮಲ್ಹೋತ್ರಾ ಅವರು ತಮ್ಮ ಕ್ರಿಕೆಟ್ ಜೀವನದ ನಂತರ ಬಂಗಾಳ ತಂಡಕ್ಕೆ ತರಬೇತುದಾರರಾಗಿದ್ದರು. ಅವರು ಏಳು ಟೆಸ್ಟ್‌, 20 ಏಕದಿನ ಪಂದ್ಯಗಳನ್ನು ಭಾರತ ತಂಡದ ಪರ ಆಡಿದ್ದಾರೆ. ತಮ್ಮ ಹೇಳಿಕೆಗೆ ವಿರೋಧ ತೀವ್ರವಾಗುತ್ತಿದ್ದಂತೆ ಅವರು ‘ಎಕ್ಸ್‌’ನಲ್ಲಿ (ಹಿಂದಿನ ಟ್ವಿಟರ್) ಬೇಷರತ್ ಕ್ಷಮೆಯಾಚಿಸಿದ್ದಾರೆ. ‘ಕಳೆದ ಸಂಜೆ ಪಂದ್ಯದ ನಂತರ ನನ್ನ ಹೇಳಿಕೆಯಿಂದ ಅಸ್ಸಾಂ ಜನತೆಯ ಭಾವನೆಗಳಿಗೆ ನೋವಾದಲ್ಲಿ ಕ್ಷಮೆ ಕೇಳುತ್ತೇನೆ’ ಎಂದು ಪೋಸ್ಟ್‌ ಹಾಕಿದ್ದಾರೆ. ‘ನನ್ನಿಂದ ತಪ್ಪಾಗಿದೆ. ಅದು ಉದ್ದೇಶಪೂರ್ವಕವಾಗಿರಲಿಲ್ಲ. ಅವರ ಪ್ರಗತಿಯ ಕುರಿತಾಗಿ ಮಾತನಾಡುವಾಗ ಹೀಗೆ ಹೇಳಿಹೋಯಿತು. ಇದಕ್ಕೆ ವಿಷಾದಿಸುವೆ ಮತ್ತು ಕ್ಷಮೆ ಕೇಳುವೆ’ ಎಂದು ಬರೆದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.