ದೆಹಲಿ | ಏಕದಿನ ವಿಶ್ವಕಪ್: ಪ್ರಾಕ್ಟೀಸ್‌ ರದ್ದುಗೊಳಿಸಿದ ಬಾಂಗ್ಲಾ ತಂಡ ದೆಹಲಿ: ಏಕದಿನ ವಿಶ್ವಕಪ್ ಪಂದ್ಯ ಆಡಲು ಇಲ್ಲಿಗೆ ಬಂದಿರುವ ಬಾಂಗ್ಲಾದೇಶ ತಂಡವು, ದೆಹಲಿಯಲ್ಲಿ ವಾಯು ಮಾಲಿನ್ಯ ಗಂಭೀರ ಹಂತಕ್ಕೆ ತಲುಪಿರುವ ಕಾರಣ ಶುಕ್ರವಾರ ನೆಟ್‌ ಪ್ರಾಕ್ಟೀಸ್‌ ರದ್ದುಗೊಳಿಸಿತು. ತಂಡವು ನವೆಂಬರ್‌ 6ರಂದು ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಬುಧವಾರ ಬಾಂಗ್ಲಾದೇಶ ತಂಡ ಇಲ್ಲಿಗೆ ತಲುಪಿತ್ತು. ಮೂರು ಬಾರಿ ತಂಡ ತಾಲೀಮು ನಡೆಸಲು ಉದ್ದೇಶಿಸಿದ್ದು, ಮೊದಲನೆಯದು ಶುಕ್ರವಾರ ಸಂಜೆ 6 ರಿಂದ 9 ಗಂಟೆಯವರೆಗೆ ನಡೆಯಬೇಕಿತ್ತು. ಆದರೆ ಆಟಗಾರರ ಹಿತದೃಷ್ಟಿಯಿಂದ ಅದನ್ನು ರದ್ದುಗೊಳಿಸಿರುವುದಾಗಿ ಬಾಂಗ್ಲಾದೇಶ ತಂಡದ ನಿರ್ದೇಶಕ ಖಾಲಿದ್ ಮಹಮುದ್ ತಿಳಿಸಿದರು. ದೆಹಲಿ ನಗರದ ಅನೇಕ ಕಡೆ ಗಾಳಿ ಗುಣಮಟ್ಟದ ಸೂಚ್ಯಂಕ 400 ತಲುಪಿದ್ದು, ಅಪಾಯದ ಮಟ್ಟದತ್ತ ಸಾಗಿದೆ. ‘ನಮಗೆ ಅಭ್ಯಾಸ ನಡೆಸಲು ಇನ್ನೂ ಎರಡು ದಿನಗಳ ಅವಕಾಶ ಇದೆ. ಕೆಲವರಿಗೆ ಈಗಾಗಲೇ ಕೆಮ್ಮು–ಕಫದ ಸಮಸ್ಯೆ ಕಾಣಿಸಿಕೊಂಡಿದೆ. ಅನಾರೋಗ್ಯಕ್ಕೆ ತುತ್ತಾಗದಿರಲು ಈ ಕ್ರಮ. ನಮಗೆ ನವೆಂಬರ್ 6ರ ಪಂದ್ಯ ಮಹತ್ವದ್ದು. ಎಲ್ಲ ಆಟಗಾರರು ಫಿಟ್‌ ಆಗಿರಬೇಕು ಎಂಬುದು ನಮ್ಮ ಅಪೇಕ್ಷೆ’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.