ಅಟ್ಕಿನ್ಸನ್‌ಗೆ ಐದು ವಿಕೆಟ್: ಇಂಗ್ಲೆಂಡ್ ಜಯಭೇರಿ ಲಂಡನ್ : ಗಸ್ ಅಟ್ಕಿನ್ಸನ್ (61ಕ್ಕೆ5) ಸ್ವಿಂಗ್ ದಾಳಿಯ ಮುಂದೆ ವೆಸ್ಟ್ ಇಂಡೀಸ್ ತಂಡವು ಇಂಗ್ಲೆಂಡ್ ಎದುರಿನ ಟೆಸ್ಟ್‌ ಪಂದ್ಯದಲ್ಲಿ ಪರಾಭವಗೊಂಡಿತು. ಪಂದ್ಯದ ಮೂರನೇ ದಿನದಾಟದಲ್ಲಿಯೇ ವಿಂಡೀಸ್ ತಂಡವು ದೂಳೀಪಟವಾಯಿತು. ಆತಿಥೇಯ ಇಂಗ್ಲೆಂಡ್ ಇನಿಂಗ್ಸ್ ಮತ್ತು 114 ರನ್‌ಗಳಿಂದ ಜಯಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1–0 ಮುನ್ನಡೆ ಸಾಧಿಸಿತು. ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ವಿಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 121 ರನ್‌ ಗಳಿಸಿತ್ತು. ಅದಕ್ಕುತ್ತರವಾಗಿ ಇಂಗ್ಲೆಂಡ್ 371 ರನ್ ಪೇರಿಸಿತ್ತು. ಅದರೊಂದಿಗೆ 250 ರನ್‌ಗಳ ಮುನ್ನಡೆ ಸಾಧಿಸಿತ್ತು. ಇದನ್ನು ಮೀರುವ ಹಾದಿಯಲ್ಲಿ ವಿಂಡೀಸ್ ಎಡವಿತು. ಅಟ್ಕಿನ್ಸನ್ ಮತ್ತು ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವಾಡಿದ ಜಿಮ್ಮಿ ಆ್ಯಂಡರ್ಸನ್ (32ಕ್ಕೆ3) ಅವರ ಬೌಲಿಂಗ್‌ ಮುಂದೆ ಕುಸಿಯಿತು. 47 ಓವರ್‌ಗಳಲ್ಲಿ 136 ರನ್ ಗಳಿಸಿ ಆಲೌಟ್ ಆಯಿತು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ವೆಸ್ಟ್ ಇಂಡೀಸ್:41.4 ಓವರ್‌ಗಳಲ್ಲಿ 121. ಇಂಗ್ಲೆಂಡ್: 90 ಓವರ್‌ಗಳಲ್ಲಿ 371. ಎರಡನೇ ಇನಿಂಗ್ಸ್: ವೆಸ್ಟ್ ಇಂಡೀಸ್: 47 ಓವರ್‌ಗಳಲ್ಲಿ 136 (ಅಲಿಕ್ ಅಥಾಂಜೆ 22, ಜೇಸನ್ ಹೋಲ್ಡರ್ 20, ಗುಡಕೇಶ್ ಮೋತಿ ಔಟಾಗದೆ 31, ಜೇಮ್ಸ್ ಆ್ಯಂಡರ್ಸನ್ 32ಕ್ಕೆ3, ಗಸ್ ಅಟ್ಕಿನ್ಸನ್ 61ಕ್ಕೆ5, ಬೆನ್ ಸ್ಟೋಕ್ಸ್ 25ಕ್ಕೆ2) ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ ಇನಿಂಗ್ಸ್ ಹಾಗೂ 114 ರನ್‌ಗಳ ಜಯ. ಸರಣಿಯಲ್ಲಿ ಇಂಗ್ಲೆಂಡ್‌ಗೆ 1–0 ಮುನ್ನಡೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.