ಭಾರತದ ವಿರುದ್ಧ ಹೀನಾಯ ಸೋಲು: ಶ್ರೀಲಂಕಾ ಕ್ರಿಕೆಟ್ ಮಂಡಳಿ ವಜಾ, ರಣತುಂಗ ಅಧ್ಯಕ್ಷ ಕೊಲಂಬೊ: ರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯನ್ನು ವಜಾಗೊಳಿಸಿ ಶ್ರೀಲಂಕಾದ ಕ್ರೀಡಾ ಸಚಿವ ರೋಷನ್‌ ರಣಸಿಂಘೆ ಅವರು ಸೋಮವಾರ ಆದೇಶಿಸಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಶ್ರೀಲಂಕಾ ತಂಡವು ಅವಮಾನಕಾರಿ ಸೋಲನುಭವಿಸಿದ ಕೆಲ ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ. 1996ರ ಏಕದಿನ ವಿಶ್ವಕಪ್‌ ವಿಜೇತ ತಂಡದ ನಾಯಕ ಅರ್ಜುನ ರಣತುಂಗ ಅವರನ್ನು ಮಂಡಳಿಯ ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ನೆವೆಂಬರ್ 2 ರಂದು ಮುಂಬೈನಲ್ಲಿ ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ 358 ರನ್‌ಗಳ ಗುರಿ ಪಡೆದಿದ್ದ ಶ್ರೀಲಂಕಾ ತಂಡವು ಕೇವಲ 55 ರನ್‌ಗಳಿಗೆ ಸರ್ವಪತನ ಕಂಡು, 302ರನ್‌ಗಳ ಹೀನಾಯ ಸೋಲು ಅನುಭವಿಸಿತ್ತು. ಇದರ ಬೆನಲ್ಲೇ ಮಂಡಳಿಯ ಪದಾಧಿಕಾರಿಗಳ ವಿರುದ್ಧ ರಣಸಿಂಘೆ ಅವರು ಕಿಡಿ ಕಾರಿದ್ದರು. ಅಧಿಕಾರದಲ್ಲಿ ಉಳಿಯಲು ಅವರಿಗೆ ನೈತಿಕ ಹಕ್ಕಿಲ್ಲ ಎಂದು ನುಡಿದಿದ್ದ ಅವರು, ಕೂಡಲೇ ಅವರು ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.