ಬಾಂಗ್ಲಾದೇಶ–ಶ್ರೀಲಂಕಾ ಹಣಾಹಣಿ: ದೆಹಲಿ ಪಂದ್ಯದ ಮೇಲೆ ಕವಿದ ‘ಮಾಲಿನ್ಯ‘ದ ಮೋಡ ನವದೆಹಲಿ (ಪಿಟಿಐ): ದೇಶದ ರಾಜಧಾನಿಯಲ್ಲಿ ಮಲೀನವಾಗಿರುವ ಗಾಳಿಯ ಸಮಸ್ಯೆಯಿಂದಾಗಿ ಸೋಮವಾರ ಇಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯವು ನಡೆಯುವುದು ಅನುಮಾನವೆನ್ನಲಾಗಿದೆ. ಸೆಮಿಫೈನಲ್ ಪ್ರವೇಶದ ಹಾದಿಯಿಂದ ಈಗಾಗಲೇ ಹೊರಬಿದ್ದಿರುವ ಬಾಂಗ್ಲಾದೇಶ ಮತ್ತು ಇನ್ನೊಂದು ಸಣ್ಣ ಭರವಸೆ ಇರುವ ಶ್ರೀಲಂಕಾ ತಂಡಗಳು ಈ ಪಂದ್ಯದಲ್ಲಿ ಆಡಬೇಕಿದೆ. ದೆಹಲಿಯಲ್ಲಿ ಗಾಳಿ ಗುಣಮಟ್ಟ ಸೂಚ್ಯಂಕ (ಎಕ್ಯೂಐ)ದಲ್ಲಿ ಗಂಭೀರ ಪರಿಸ್ಥಿತಿ ಮುಂದುವರಿದಿದೆ. ದಪ್ಪನೆಯ ಮಲೀನ ಮಂಜಿನ ಪದಕ ಕವಿದಿರುವುದು ಗೋಚರಿಸುತ್ತಿದೆ. ಇದರಿಂದಾಗಿ ಉಭಯ ತಂಡಗಳೂ ತಮ್ಮ ಅಭ್ಯಾಸವನ್ನೂ ಈಚೆಗೆ ರದ್ದು ಮಾಡಿದ್ದವು. ಆದರೆ ಶನಿವಾರ ಶ್ರೀಲಂಕಾ ತಂಡವು ನೆಟ್ಸ್‌ ಅಭ್ಯಾಸ ನಡೆಸಲಿಲ್ಲ. ಒಳಾಂಗಣದಲ್ಲಿಯೇ ತಾಲೀಮು ಮಾಡಿತು. ಫಿರೋಜ್ ಶಾ ಕೋಟ್ಲಾದಲ್ಲಿರುವ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ತಂಡದ ಆಟಗಾರರು ಮುಖಗವಸು ಧರಿಸಿ ಅಭ್ಯಾಸ ನಡೆಸಿದ್ದರು. ಗರಿಷ್ಟ ಎಕ್ಯೂಐ 400ರ ಮಟ್ಟದಲ್ಲಿಯೇ ಇದೆ. ಇದು ಅಪಾಯಕಾರಿ ಮಟ್ಟವಾಗಿದ್ದು ಇದು ಮಂಗಳವವಾರದವರೆಗೂ ಮುಂದುವರಿಯುವ ಸಾಧ್ಯತೆ ಇದೆ. ಭಾನುವಾರ ಬೆಳಿಗ್ಗೆಯೂ ಇದು 457ರ ಮಟ್ಟಕ್ಕೂ ಏರಿತ್ತು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ತಿಳಿಸಿದೆ. ಪಂದ್ಯ ದಿನದ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತಿಳಿಸಿದೆ. ‘ಐಸಿಸಿಯ ನಿಯಮ ಆರ್ಟಿಕಲ್ 2.8ರ ಪ್ರಕಾರ ಪಂದ್ಯದ ದಿನ ಇಬ್ಬರೂ ಅಂಪೈರ್‌ಗಳು ಹವಾಮಾನ, ಬೆಳಕು, ಮೈದಾನದ ಪರಿಸ್ಥಿತಿ ಮತ್ತು ಕ್ರೀಡಾಂಗಣದ ಗುಣಮಟ್ಟಗಳನ್ನು ಅವಲೋಕಿಸಿ ಆಟಗಾರರಿಗೆ ಅಪಾಯಕಾರಿ ಇದೆಯೋ ಇಲ್ಲವೋ ಎಂದು ನಿರ್ಧರಿಸುತ್ತಾರೆ. ಒಂದೊಮ್ಮೆ ಸ್ಥಿತಿ ಆತಂಕಕಾರಿಯಾಗಿದ್ದರೆ ಪಂದ್ಯವನ್ನು ಕೂಡಲೇ ರದ್ದುಪಡಿಸಬಹದು’ ಎಂದು ಐಸಿಸಿ ತಿಳಿಸಿದೆ. ಈ ಎರಡೂ ತಂಡಗಳಿಗೆ ಇದೇನೂ ಹೊಸ ಅನುಭವ ಅಲ್ಲ. 2017ರಲ್ಲಿ ಇಲ್ಲಿಗೆ ಟೆಸ್ಟ್ ಆಡಲು ಬಂದಿದ್ದ ಶ್ರೀಲಂಕಾ ತಂಡವು ಇಂತಹದೇ ಪರಿಸ್ಥಿತಿ ಎದುರಿಸಿತ್ತು. ಮಾಸ್ಕ್ ಧರಿಸಿ ಭಾಗವಹಿಸಿತ್ತು. ಆಗ ಲಂಕಾ ಆಟಗಾರರು ಉಸಿರಾಟದ ತೊಂದರೆಯನ್ನೂ ಎದುರಿಸಿದ್ದರು. 2019ರಲ್ಲಿ ಇಲ್ಲಿ ನಡೆದಿದ್ದ ಟಿ20 ಪಂದ್ಯದಲ್ಲಿ ಆಡಲು ಬಂದಿದ್ದ ಬಾಂಗ್ಲಾದೇಶ ತಂಡದವರಿಗೂ ಇದೇ ಅನುಭವ ಆಗಿತ್ತು. ಆದರೆ ಈ ಪಂದ್ಯವು ಬಾಂಗ್ಲಾಗಿಂತ ಶ್ರೀಲಂಕಾಕ್ಕೆ ಮುಖ್ಯವಾಗಿದೆ. ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಲಂಕಾ ತಂಡಕ್ಕೆ ಇನ್ನೆರಡು ಪಂದ್ಯಗಳು ಬಾಕಿಯಿವೆ. ಅವೆರೆಡರಲ್ಲೂ ಜಯ ಸಾಧಿಸಿದರೆ ನಾಲ್ಕರ ಘಟ್ಟಕ್ಕೆ ಪ್ರವೇಶಿಸುವ ಅಣ್ಣ ಅವಕಾಶ ಅದಕ್ಕಿದೆ. ಅದಾಗದಿದ್ದರೂ ಅಂತಿಮ ಏಳು ತಂಡಗಳಲ್ಲಿ ಸ್ಥಾನ ಉಳಿಸಿಕೊಂಡರೆ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ನೇರ ಅರ್ಹತೆ ಗಿಟ್ಟಿಸಬಹುದು ಎಂಬ ಲೆಕ್ಕಾಚಾರದಲ್ಲಿ ಕುಸಾಲ ಮೆಂಡಿಸ್ ಬಳಗ ಇದೆ. ಆದರೆ ದೆಹಲಿಯ ‘ಗಾಳಿ’ಯು ಲಂಕೆಯ ಪರವಾಗಿ ಬೀಸುವುದೇ ಕಾದು ನೋಡಬೇಕಿದೆ. ಪಂದ್ಯ ಆರಂಭ: ಮಧ್ಯಾಹ್ನ 2 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್, ಹಾಟ್‌ಸ್ಟಾರ್ ಆ್ಯಪ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.