| ಲಂಕಾ ತಂಡದ ಕಳಪೆ ಪ್ರದರ್ಶನಕ್ಕೆ ಬಾಹ್ಯ ಸಂಚು ಕಾರಣ: ವಿಕ್ರಮಸಿಂಘೆ ಕೊಲಂಬೊ ‘ಬಾಹ್ಯ ಸಂಚಿನ’ ಪರಿಣಾಮದಿಂದ ಶ್ರೀಲಂಕಾ ಕ್ರಿಕೆಟ್‌ ತಂಡದ ನಿರಾಶಾದಾಯಕ ಪ್ರದರ್ಶನ ನೀಡಿದೆ ಎಂದು ಕ್ರಿಕೆಟ್‌ ತಂಡದ ಮುಖ್ಯ ಆಯ್ಕೆಗಾರ ಪ್ರಮೋದಯ ವಿಕ್ರಮಸಿಂಘೆ ಶುಕ್ರವಾರ ಇಲ್ಲಿ ಆರೋಪಿಸಿದರು. ಶುಕ್ರವಾರ ಬೆಳಿಗ್ಗೆ ಶ್ರೀಲಂಕಾ ತಂಡ ಬೆಂಗಳೂರಿನಿಂದ ಇಲ್ಲಿಗೆ ಬಂದಿಳಿಯಿತು. ಲಂಕನ್ನರು ಗುರುವಾರ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಐದು ವಿಟ್‌ಗಳ ಸೋಲನುಭವಿಸಿದ್ದರು. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಕೇಳಿದಾಗ, ‘ಈ ಬಗ್ಗೆ ಎಲ್ಲ ವಿವರ ಬಹಿರಂಗಪಡಿಸಲು ನನಗೆ ಎರಡು ದಿನ ಕೊಡಿ. ಹೊರಗಿನ ಸಂಚಿನ ಪರಿಣಾಮ ಇದು’ ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡರು. ವಿಕ್ರಮಸಿಂಘೆ ಅವರು 1996ರಲ್ಲಿ ವಿಶ್ವಕಪ್ ಗೆದ್ದ ಲಂಕಾ ತಂಡದಲ್ಲಿ ಆಡಿದ್ದರು. ‘ತುಂಬಾ ಬೇಸರದ ವಿಷಯ. ಇದರ ಹೊಣೆಯನ್ನು ನಾನು ಹೊರುತ್ತೇನೆ’ ಎಂದು ಅವರು ವಿಮಾನನಿಲ್ದಾಣದಲ್ಲಿದ್ದ ಸುದ್ದಿಗಾರರಿಗೆ ತಿಳಿಸಿದರು. 1992ರ ನಂತರ ಇದು ಶ್ರೀಲಂಕಾ ತಂಡದ ಅತಿ ಕಳಪೆ ಪ್ರದರ್ಶನ ಎನಿಸಿತು. ಭಾರತದಲ್ಲಿ ಆ ತಂಡ ಆಡಿದ 9 ಪಂದ್ಯಗಳಲ್ಲಿ ಗೆದ್ದಿದ್ದು ಬರೇ ಎರಡರಲ್ಲಿ. ತಂಡವನ್ನು ಗಾಯಾಳುಗಳ ಸಮಸ್ಯೆ ಕಾಡಿತು. ಹೀಗಾಗಿ ಮೂಲ ತಂಡದಲ್ಲಿ ಇಲ್ಲದ ಆಟಗಾರರು ತಂಡವನ್ನು ಸೇರಿಕೊಳ್ಳಬೇಕಾಯಿತು. ತಂಡದ ನಾಯಕರಾಗಿದ್ದ ದಸುನ್ ಶನಕ ಕೂಡ ಗಾಯಾಳಾಗಿದ ಪರಿಣಾಮ ಟೂರ್ನಿಯ ಮಧ್ಯದಲ್ಲೇ ನಾಯಕತ್ವ ಬದಲಾಯಿತು. ಭಾರತ ವಿರುದ್ಧ 56 ರನ್ನಿಗೆ ಉರುಳಿದ ಪರಿಣಾಮ ತಂಡ ತವರಿನಲ್ಲಿ ಆಕ್ರೋಶ ಎದುರಿಸಬೇಕಾಯಿತು. ಕ್ರೀಡಾ ಸಚಿವ ರೋಶನ್ ರಣಸಿಂಘೆ ಅವರು ಕ್ರಿಕೆಟ್‌ ಮಂಡಳಿಯನ್ನು ವಜಾಗೊಳಿಸಿ, ಮಧ್ಯಂತರ ಸಮಿತಿ ನೇಮಕ ಮಾಡಿದ್ದರು. ಗುರುವಾರ, ಆಡಳಿತ ಮತ್ತು ವಿರೋಧ ಪಕ್ಷಗಳು ಒಗ್ಗಟ್ಟಾಗಿ, ಮಂಡಳಿ ಸದಸ್ಯರ ರಾಜೀನಾಮೆಗೆ ಆಗ್ರಹಿಸಿದ್ದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.