ಐಸಿಸಿ ಕ್ರಮ ಕಾನೂನುಬಾಹಿರ: ಲಂಕಾ ಸಚಿವ ರೋಶನ್ ರಣಸಿಂಘೆ ಕೊಲಂಬೊ: ರಾಜಕೀಯ ಹಸ್ತಕ್ಷೇಪದ ಕಾರಣ ನೀಡಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿಯನ್ನು ಅಮಾನತು ಮಾಡಿರುವ ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಕ್ರಮ ಕಾನೂನುಬಾಹಿರ ಎಂದು ಕ್ರೀಡಾ ಸಚಿವ ರೋಶನ್ ರಣಸಿಂಘೆ ಶನಿವಾರ ಇಲ್ಲಿ ಹೇಳಿದ್ದಾರೆ. ಐಸಿಸಿ ಜೊತೆ ಈ ಬಿಕ್ಕಟ್ಟು ಬಗೆಹರಿಸಲು ತಮಗೆ ಆಗದಿದ್ದಲ್ಲಿ ಸ್ವಿಜರ್ಲೆಂಡ್‌ನಲ್ಲಿರುವ ಅಂತರರಾಷ್ಟ್ರೀಯ ಕ್ರೀಡಾ ನ್ಯಾಯಪಂಚಾಯಿತಿ ಮೊರೆ ಹೋಗುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದರು. ಐಸಿಸಿ, ಶುಕ್ರವಾರ ಶ್ರೀಲಂಕಾ ಕ್ರಿಕೆಟ್‌ ಮಂಡಳಿಯ ಸದಸ್ಯತ್ವವನ್ನು ಅಮಾನತುಗೊಳಿಸಿತ್ತು ಶ್ರೀಲಂಕಾ ಜನವರಿಯಲ್ಲಿ 19 ವರ್ಷದೊಳಗಿನವರ ವಿಶ್ವಕಪ್ ಆತಿಥ್ಯ ವಹಿಸಬೇಕಾಗಿದೆ. ಮುಂದಿನ ವಾರ ತಾವು ದುಬೈಗೆ ತೆರಳಿ ಐಸಿಸಿ ಅಧಿಕಾರಿಗಳನ್ನು ಭೇಟಿ ಮಾಡುವುದಾಗಿ ಲಂಕಾ ಕ್ರಿಕೆಟ್‌ ಮುಖ್ಯಸ್ಥ ಶಮ್ಮಿ ಸಿಲ್ವ ಸುದ್ದಿಗಾರರಿಗೆ ತಿಳಿಸಿದರು. ಅದಕ್ಕೆ ಮೊದಲು, ಮಂಡಳಿಯ ವ್ಯವಹಾರಗಳಲ್ಲಿ ರಾಜಕೀಯ ಹಸ್ತಕ್ಷೇಪ ಮಾಡುವುದಿಲ್ಲವೆಂದು ಸರ್ಕಾರದಿಂದ ತಮಗೆ ಆಶ್ವಾಸನೆ ಸಿಗಬೇಕು ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.