ಕ್ರಿಕೆಟ್‌ ಸೇರ್ಪಡೆ: ಐಒಸಿ ಜತೆ ಚರ್ಚೆಗೆ ಎಎಸ್‌ಒಐಎಫ್‌ ನಿರ್ಧಾರ ಜಿನೇವಾ: 2028 ಲಾಸ್‌ ಏಂಜಲಿಸ್‌ ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಒಳಗೊಂಡಂತೆ ಹೊಸ ಕ್ರೀಡೆಗಳನ್ನು ಸೇರಿಸುವುದರಿಂದ ಆಗುವ ಪರಿಣಾಮಗಳ ಬಗ್ಗೆ ಚರ್ಚಿಸಲು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಜತೆ ತುರ್ತು ಸಭೆ ನಡೆಸಲು ದಿ ಅಸೋಸಿಯೇಷನ್‌ ಆಫ್‌ ಸಮ್ಮರ್‌ ಒಲಿಂಪಿಕ್‌ ಇಂಟರ್‌ನ್ಯಾಷನಲ್‌ ಫೆಡರೇಷನ್‌ (ಎಎಸ್‌ಒಐಎಫ್‌) ನಿರ್ಧರಿಸಿದೆ. ಲಾಸ್‌ ಏಂಜಲಿಸ್‌ ಒಲಿಂಪಿಕ್ಸ್‌ಗೆ ಟಿ20 ಕ್ರಿಕೆಟ್‌, ಸ್ವ್ಕಾಷ್‌, ಬೇಸ್‌ಬಾಲ್‌/ ಸಾಫ್ಟ್‌ಬಾಲ್‌, ಲಕ್ರೋಸ್ ಮತ್ತು ಫ್ಲ್ಯಾಗ್‌ ಫುಟ್‌ಬಾಲ್ ಆಟಗಳನ್ನು ಸೇರ್ಪಡೆಗೊಳಿಸಲು ಕಳೆದ ತಿಂಗಳು ಮುಂಬೈನಲ್ಲಿ ನಡೆದಿದ್ದ ಐಒಸಿಯ 141ನೇ ಅಧಿವೇಶನದಲ್ಲಿ ತೀರ್ಮಾನಿಸಲಾಗಿತ್ತು. ಒಲಿಂಪಿಕ್‌ ಕೂಟಕ್ಕೆ ಕ್ರೀಡೆಗಳ ಸಂಖ್ಯೆಯನ್ನು 36ಕ್ಕೆ ಹೆಚ್ಚಿಸಿರುವುದು ‘ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ’ ಎಂದು ಎಎಸ್‌ಒಐಎಫ್‌ ಆಡಳಿತ ಸಮಿತಿ ತಿಳಿಸಿದೆ. ಹೊಸ ಕ್ರೀಡೆಗಳ ಸೇರ್ಪಡೆಯಿಂದ ಹಾಲಿ ಇರುವ ಕ್ರೀಡೆಗಳಿಗೆ ನೀಡಿರುವ ಕೋಟಾಗಳು ಮತ್ತು ಆದಾಯ ಹಂಚಿಕೆಯ ವೇಳೆ ಸಿಗುವ ಪಾಲು ಕಡಿಮೆಯಾಗಬಹುದು ಎಂಬುದು ಕೆಲವು ಕ್ರೀಡಾ ಫೆಡರೇಷನ್‌ಗಳ ಆತಂಕ. 2021ರ ಟೋಕಿಯೊ ಒಲಿಂಪಿಕ್‌ ಕೂಟದ ಆದಾಯ ಹಂಚಿಕೆಯ ವೇಳೆ ಕೆಲವು ಕ್ರೀಡಾ ಫೆಡರೇಷನ್‌ಗಳು ₹ 108 ಕೋಟಿಯಿಂದ ₹ 144 ಕೋಟಿವರೆಗಿನ ಮೊತ್ತ ಪಡೆದುಕೊಂಡಿದ್ದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.