ಫುಟ್‌ಬಾಲ್‌ ಅಕಾಡೆಮಿಗೆ 21ರಂದು ಚಾಲನೆ ನವದೆಹಲಿ: ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಭಾಗವಾಗಿ ಆರಂಭಿಸಲಾಗುತ್ತಿರುವ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್– ವಿಶ್ವ ಫುಟ್‌ಬಾಲ್‌ ಸಂಸ್ಥೆ (ಫೀಫಾ) ಅಕಾಡೆಮಿಯನ್ನು ಇದೇ 21ರಂದು ಭುವನೇಶ್ವರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಖ್ಯಾತ ಫುಟ್‌ಬಾಲ್ ತರಬೇತುದಾರ ಆರ್ಸೇನ್ ವೆಂಗರ್ ಅವರು ಉದ್ಘಾಟಿಸುವರು. ಫೀಫಾದ ಫುಟ್‌ಬಾಲ್‌ ಅಭಿವೃದ್ಧಿ ಯೋಜನೆಯ ಮುಖ್ಯಸ್ಥರಾಗಿರುವ ವೆಂಗರ್ ಅವರು ನವೆಂಬರ್ 19 ರಿಂದ 23ರವರೆಗೆ ಭಾರತದಲ್ಲಿ ಇರಲಿದ್ದು, ಐಎಸ್‌ಎಲ್‌, ಐ ಲೀಗ್ ಕ್ಲಬ್‌ಗಳ ಜೊತೆ ದೇಶದಲ್ಲಿ ಫುಟ್‌ಬಾಲ್‌ ಅಭಿವೃದ್ಧಿಯಲ್ಲಿ ನಿರತರಾಗಿರುವ ಅಕಾಡೆಮಿಗಳನ್ನು ಭೇಟಿಯಾಗಲಿದ್ದಾರೆ ಎಂದು ಎಐಎಫ್‌ಎಫ್‌ ಅಧ್ಯಕ್ಷ ಕಲ್ಯಾಣ್ ಚೌಬೆ ಬುಧವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವೆಂಗರ್ ಅವರು 1996ರಿಂದ 2018ರವರೆಗೆ ಅರ್ಸೆನಲ್ ತಂಡದ ಮ್ಯಾನೇಜರ್ ಆಗಿದ್ದರು. ಈ ಅವಧಿಯಲ್ಲಿ ಕ್ಲಬ್ ಮೂರು ಸಲ ಪ್ರೀಮಿಯರ್ ಲೀಗ್‌ ಪ್ರಶಸ್ತಿಗಳ ಜೊತೆ ಏಳು ಸಲ ಎಫ್‌ಎ ಕಪ್ ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. 49 ಪಂದ್ಯಗಳಲ್ಲಿ ಆ ತಂಡ ಅಜೇಯವಾಗಿ ಉಳಿದಿತ್ತು. ‘ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನ ದೂರದೃಷ್ಟಿಯ ಯೋಜನೆ ಇದಾಗಿದ್ದು, 14 ವರ್ಷ ವಯಸ್ಸಿನವರೂ ಈ ಅಕಾಡೆಮಿಯಲ್ಲಿ ತರಬೇತಿ ಪಡೆಯಲಿದ್ದಾರೆ ಎಂದು ಫೆಡರೇಷನ್‌ನ ಹಂಗಾಮಿ ಕಾರ್ಯದರ್ಶಿ ಎಂ.ಸತ್ಯನಾರಾಯಣ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.