ವಿಜಯ್ ಹಜಾರೆ ಟ್ರೋಫಿ: ಗೆಲುವಿನ ಓಟ ಮುಂದುವರಿಸುವ ಛಲದಲ್ಲಿ ಕರ್ನಾಟಕ ಅಹಮದಾಬಾದ್: ಈ ಬಾರಿಯ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಕರ್ನಾಟಕ ಎರಡನೇ ಪಂದ್ಯಕ್ಕೆ ಸಿದ್ಧವಾಗಿದೆ. ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಮಯಂಕ್ ಅಗರವಾಲ್ ಬಳಗವು ಉತ್ತರಾಖಂಡ ವಿರುದ್ಧ ಸೆಣಸಲಿದೆ. ಸಿ ಗುಂಪಿನ ಪ್ರಥಮ ಪಂದ್ಯದಲ್ಲಿ ಕರ್ನಾಟಕ ತಂಡವು 222 ರನ್‌ಗಳಿಂದ ಜಮ್ಮು–ಕಾಶ್ಮೀರ ವಿರುದ್ಧ ಜಯಿಸಿತ್ತು. ಅದರಲ್ಲಿ ಆರಂಭಿಕ ಬ್ಯಾಟರ್‌ಗಳಾದ ಮಯಂಕ್ ಮತ್ತು ಆರ್. ಸಮರ್ಥ್ ಅವರು ಶತಕ ಗಳಿಸಿದ್ದರು. ದೇವದತ್ತ ಪಡಿಕ್ಕಲ್ ಅವರು ಮಿಂಚಿನ ಅರ್ಧಶತಕ ಹೊಡೆದು ತಮ್ಮ ಫಿಟ್‌ನೆಸ್ ಪ್ರದರ್ಶಿಸಿದ್ದರು. ಅದರೊಂದಿಗೆ ತಂಡವು ದೇಶಿ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ 400 ರನ್‌ಗಳಿಗಿಂತ ಹೆಚ್ಚಿನ ಮೊತ್ತ ಪೇರಿಸಿತ್ತು. ಕರ್ನಾಟಕದ ಪ್ರಮುಖ ಶಕ್ತಿಯಾದ ಬೌಲಿಂಗ್ ವಿಭಾಗವೂ ಉತ್ತಮವಾಗಿಯೇ ಆಡಿತ್ತು. ವೇಗಿ ವೈಶಾಖ ವಿಜಯಕುಮಾರ್ ನಾಲ್ಕು ವಿಕೆಟ್ ಗಳಿಸಿದ್ದರು. ಅವರಿಗೆ ವಿದ್ವತ್ ಕಾವೇರಪ್ಪ ಮತ್ತು ವಿ. ಕೌಶಿಕ್ ಕೂಡ ಉತ್ತಮ ಜೊತೆ ನೀಡಿದ್ದರು. ಅಲ್ಲದೇ ಸ್ಪಿನ್ನರ್ ಜೆ. ಸುಚಿತ್ ಹಾಗೂ ಕೆ. ಗೌತಮ್ ಕೂಡ ಉತ್ತಮ ಬೌಲಿಂಗ್ ಮಾಡಿದ್ದರು. ಈ ಪಂದ್ಯದಲ್ಲಿ ಕರ್ನಾಟಕ ತಂಡವು ಉತ್ತರಾಖಂಡ ತಂಡದ ವಿರುದ್ಧವೂ ಸುಲಭ ಜಯದ ನಿರೀಕ್ಷೆಯಲ್ಲಿದೆ. ಅನುಭವ ಮತ್ತು ಬಲಾಬಲದಲ್ಲಿ ಕರ್ನಾಟಕ ತಂಡವೇ ಬಲಿಷ್ಠವಾಗಿದೆ. ಜೀವನ್‌ಜ್ಯೋತ್ ಸಿಂಗ್ ನಾಯಕತ್ವದ ಉತ್ತರಾಖಂಡ ತಂಡವು ಮೊದಲ ಪಂದ್ಯದಲ್ಲಿ ಹರಿಯಾಣ ಎದುರು ಸೋತಿದೆ. ತಂಡದ ಆದಿತ್ಯ ತರೆ ಅರ್ಧಶತಕ ಗಳಿಸಿದ್ದರು. ಆರಂಭಿಕ ಬ್ಯಾಟರ್ ಕುನಾಲ್ ಚಾಂಡೇಲಾ 47 ರನ್‌ ಗಳಿಸಿದ್ದರು. ಆದರೆ ಉಳಿದ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿರಲಿಲ್ಲ. ಹರಿಯಾಣದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಆರು ವಿಕೆಟ್ ಗಳಿಸಿ ಉತ್ತರಾಖಂಡಕ್ಕೆ ಸಿಂಹಸ್ವಪ್ನರಾಗಿದ್ದರು. ಕರ್ನಾಟಕದ ಸ್ಪಿನ್ನರ್‌ಗಳನ್ನು ಎದುರಿಸುವುದು ಉತ್ತರಾಖಂಡದ ಬ್ಯಾಟರ್‌ಗಳಿಗೆ ಸವಾಲಾಗಬಹುದು. ‍ಪಂದ್ಯ ಆರಂಭ: ಬೆಳಿಗ್ಗೆ 9 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.