ವಿಶ್ವಕಪ್ ಫೈನಲ್‌ನಲ್ಲಿ ಸೋಲು: ಆತಿಥೇಯ ಆಟಗಾರರ ಕಣ್ಣೀರು ಅಹಮದಾಬಾದ್: ಮೋಟೆರಾದ ಕ್ರೀಡಾಂಗಣದಲ್ಲಿ ಒಂದೆಡೆ ಆಸ್ಟ್ರೇಲಿಯಾದ ಆಟಗಾರರು ಮತ್ತು ಗ್ಯಾಲರಿಯಲ್ಲಿದ್ದ ಹಳದಿ ಪೋಷಾಕು ಧರಿಸಿದ್ದ ಬೆರಳೆಣಿಕೆಯಷ್ಟು ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಅದೇ ಇನ್ನೊಂದೆಡೆ; ಆತಿಥೇಯ ಭಾರತ ತಂಡದ ಆಟಗಾರರು ಮತ್ತು 90 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಕಣ್ಣೀರಲ್ಲಿ ಮುಳುಗಿದರು. ಈ ಬಾರಿಯ ವಿಶ್ವಕಪ್ ಟೂರ್ನಿಯ ಪ್ರತಿಯೊಂದು ಪಂದ್ಯದಲ್ಲಿ ಭಾರತ ತಂಡವು ಗೆಲುವಿನಿಂದ ಸಂಭ್ರಮಿಸಿದ್ದನ್ನೇ ನೋಡಿದ್ದ ಅಭಿಮಾನಿಗಳಿಗೆ ಈ ಸೋಲು ಅರಗಿಸಿಕೊಳ್ಳುವುದು ಕಷ್ಟವಾಯಿತು. ಪರಸ್ಪರ ಅಪ್ಪಿಕೊಂಡು ಬಿಕ್ಕಳಿಸಿದರು. ಭಾರವಾದ ಹೆಜ್ಜೆ ಹಾಕುತ್ತ ಹೊರನಡೆದರು. ಮೈದಾನದಲ್ಲಿ ಆಟಗಾರರ ಕತೆಯೂ ಇದಕ್ಕಿಂತ ಭಿನ್ನವಾಗಿಯೇನೂ ಇರಲಿಲ್ಲ. ಆಸ್ಟ್ರೇಲಿಯಾ ವಿಜಯದ ರನ್ ಹೊಡೆಯುತ್ತಿದ್ದಂತೆ ಭಾರತದ ಆಟಗಾರರ ಕಣ್ಣಾಲಿಗಳು ತುಂಬಿದ್ದವು. ರೋಹಿತ್ ಶರ್ಮಾ ತಲೆ ತಗ್ಗಿಸಿಕೊಂಡೇ ಪೆವಿಲಿಯನ್‌ನತ್ತ ಹೊರಟರು. ಸಿರಾಜ್ ಅವರನ್ನು ಬೂಮ್ರಾ ಸಮಾಧಾನ ಪಡಿಸುತ್ತಾ ತಮ್ಮ ಕಣ್ಣುಗಳನ್ನೂ ಒರೆಸಿಕೊಂಡರು. ವಿರಾಟ್ ಮುಖದಲ್ಲಿಯೂ ಜೀವಕಳೆ ಬತ್ತಿಹೋಗಿತ್ತು. ಕೆ.ಎಲ್. ರಾಹುಲ್ ಕುಸಿದು ಕುಳಿತಿದ್ದರು. ಇದರ ನಡುವೆಯೇ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೈಕ್ ಮುಂದೆ ಬಂದು ನಿಂತ ರೋಹಿತ್, ’ಇವತ್ತಿನ ದಿನದಲ್ಲಿ ನಾವು ನಿರೀಕ್ಷಿಸಿದಷ್ಟು ಚೆನ್ನಾಗಿ ಆಡಲಿಲ್ಲ. ಇನ್ನೂ 20–30 ರನ್‌ಗಳನ್ನು ಹೆಚ್ಚು ಗಳಿಸಿದ್ದರೆ ಚೆನ್ನಾಗಿತ್ತು. ಬ್ಯಾಟಿಂಗ್ ಚೆನ್ನಾಗಿರಲಿಲ್ಲ’ ಎಂದರು. ‘280 ರನ್‌ಗಳ ಗುರಿಯನ್ನು ಒಡ್ಡುವುದು ನಮ್ಮ ಯೋಜನೆಯಾಗಿತ್ತು. ವಿರಾಟ್ ಮತ್ತು ರಾಹುಲ್ ಬ್ಯಾಟಿಂಗ್ ಮಾಡುವಾಗ ಇದು ಸಾಧ್ಯ ಎನಿಸಿತ್ತು. ನಾಲ್ಕನೇ ವಿಕೆಟ್‌ಗೆ ಅವರು ಉತ್ತಮ ಜೊತೆಯಾಟ ಹೆಣೆದಿದ್ದರು. ಆದರೆ ನಂತರ ವಿಕೆಟ್‌ಗಳು ಉರುಳತೊಡಗಿದಾಗ ಹಿನ್ನಡೆಯಾಯಿತು’ ಎಂದರು. ಟ್ರಾವಿಸ್ ಹೆಡ್ ಆಟವನ್ನು ಕೊಂಡಾಡಿದ ಅವರು, ‘ಆಸ್ಟ್ರೇಲಿಯಾದ ಆಟಗಾರ ಹೆಡ್ ಮತ್ತು ಲಾಬುಷೇನ್ ಅವರು 192 ರನ್‌ಗಳ ದೊಡ್ಡ ಜೊತೆಯಾಟವಾಡಿದರು. ಅದು ಅವರ ಗೆಲುವಿಗೆ ಕಾರಣವಾಯಿತು. ಈಜೋಡಿಗೆ ಸಂಪೂರ್ಣ ಶ್ರೇಯ ಸಲ್ಲಬೇಕು’ ಎಂದರು. ಪಂದ್ಯ ವೀಕ್ಷಿಸಿದ ಗಣ್ಯರು ಫೈನಲ್ ಪಂದ್ಯವನ್ನು ವೀಕ್ಷಿಸಲು ವಿವಿಧ ರಂಗಗಳ ಗಣ್ಯರು ಕ್ರೀಡಾಂಗಣಕ್ಕೆ ಬಂದಿದ್ದರು. ಬಾಲಿವುಡ್ ನಟ ಶಾರೂಕ್ ಖಾನ್ ರಣಬೀರ್ ಸಿಂಗ್ ದೀಪಿಕಾ ಪಡುಕೋಣೆ ಹಿನ್ನೆಲೆ ಗಾಯಕಿ ಆಶಾಭೋಸ್ಲೆ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಮತ್ತಿತರರು ಹಾಜರಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.