ಕಬಡ್ಡಿ ಆಟದಿಂದ ಪ್ರಭಾವಿತರಾದ ನ್ಯೂಜಿಲೆಂಡ್‌ ಕ್ರಿಕೆಟಿಗರು ಮುಂಬೈ : ನ್ಯೂಜಿಲೆಂಡ್‌ ತಂಡದ ವೇಗದ ಬೌಲರ್‌ ಟ್ರೆಂಟ್ ಬೌಲ್ಡ್, ವಿಕೆಟ್ ಕೀಪರ್ ಟಾಮ್ ಲೇಥಮ್ ಮತ್ತು ಮಿಚೆಲ್ ಸ್ಯಾಂಟ್ನರ್ ಅವರು ಕಬಡ್ಡಿ ಆಟದಿಂದ ಪ್ರಭಾವಿತರಾಗಿದ್ದಾರೆ. ಇತ್ತೀಚಿನ ವಿಶ್ವಕಪ್‌ ವೇಳೆ ಈ ಆಟದ ಬಗ್ಗೆ ತಿಳಿದುಕೊಂಡಿದ್ದರು. ತಮ್ಮ ತಂಡದ ಗ್ಲೆನ್‌ ಫಿಲಿಪ್ಸ್‌, ಡೇರಿಲ್ ಮಿಚೆಲ್ ಮತ್ತು ಟಿಮ್‌ ಸೌಥಿ ಅವರು ಒಳ್ಳೆಯ ಕಬಡ್ಡಿ ಆಟಗಾರರಾಗಬಹುದು ಎಂಬುದು ಅವರ ಸಲಹೆ. ಲೇಥಮ್ ಅವರು ಕಬಡ್ಡಿ ಮತ್ತು ರಗ್ಬಿಯಲ್ಲಿ ಸಾಮ್ಯತೆ ಕಂಡಿದ್ದಾರೆ. ರಗ್ಬಿ, ನ್ಯೂಜಿಲೆಂಡ್‌ನಲ್ಲಿ ಭಾರಿ ಜನಪ್ರಿಯ ಕ್ರೀಡೆಯಾಗಿದೆ. ಭಾರತದಲ್ಲಿ ಕ್ರಿಕೆಟ್‌ನಷ್ಟೇ ರಗ್ಬಿಗೆ ಅಲ್ಲಿ ಅರಾಧಕರಿದ್ದಾರೆ. ‘ನಾನು ಒಂದೆರಡು ಸಲ ಈ ಆಟ ನೋಡಿದೆ. ಮಿಚೆಲ್ ಮತ್ತು ಸೌಥಿ ಅವರು ಈ ಆಟ ಆಡಲು ಬೇಕಾದ ದೃಢ ಮೈಕಟ್ಟು, ಚುರುಕಿನ ಪಾದಚಲನೆ ಹೊಂದಿದ್ದಾರೆ. ನಾನು ಅವರನ್ನು ಈ ಆಟಕ್ಕೆ ಶಿಫಾರಸು ಮಾಡುವೆ’ ಎಂದು ಸ್ವಾರಸ್ಯಕರವಾಗಿ ಹೇಳಿದರು. ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ತಂಡ, ಆತಿಥೇಯ ಭಾರತ ತಂಡಕ್ಕೆ ಮಣಿದಿತ್ತು. ಮುಂಬೈನಲ್ಲಿದ್ದ ಸಂದರ್ಭದಲ್ಲಿ ಅವರಿಗೆ ಪ್ರೊ ಕಬಡ್ಡಿ ಲೀಗ್‌ ಹೈಲೈಟ್ಸ್‌ ತೋರಿಸಲಾಗಿತ್ತು. ಇದು ಅವರಿಗೆ ಕಬಡ್ಡಿ ಆಟದಲ್ಲಿ ಆಸಕ್ತಿ ಮೂಡಿಸಿದೆ. ‘ನಾನು ಒಂದೆರಡು ಬಾರಿ ಕಬಡ್ಡಿ ಆಟ ನೋಡಿದೆ. ಈ ಆಟಕ್ಕೆ ದೃಢವಾದ ಕಾಲಿನ ಅಗತ್ಯವಿದೆ. ನಾನು ಈ ಆಟಕ್ಕೆ ಡೇರಿಲ್ ಮಿಚೆಲ್ ಮತ್ತು ಸೌಥಿ ಅವರ ಹೆಸರು ಸಲಹೆ ಮಾಡುವೆ’ ಎಂದು ಲೇಥಮ್ ಹೇಳಿದರು. ‘ಇದು ದೈಹಿಕ ಕ್ರೀಡೆಯಂತೆ ಕಾಣುತ್ತಿದೆ. ಕೆಲಮಟ್ಟಿಗೆ ರಗ್ಬಿಯಂತೆ ಹೋಲುತ್ತಿದೆ. ಗೆರೆ ದಾಟಿದ ಎದುರಾಳಿ ಆಟಗಾರನನ್ನು ನಿಯಂತ್ರಿಸಲು ಇನ್ನೊಂದು ತಂಡದವರು ಒಗ್ಗೂಡುತ್ತಾರೆ. ಈ ಆಟಕ್ಕೆ ಗ್ಲೆನ್‌ ಫಿಲಿಪ್ಸ್‌ ಸೂಕ್ತ ವ್ಯಕ್ತಿ’ ಎಂದು ಲೇಥಮ್ ಅಭಿಪ್ರಾಯಪಟ್ಟರು. ಆಲ್‌ರೌಂಡರ್‌ ಸ್ಯಾಂಟ್ನರ್ ಕೂಡ ಚುರುಕಾಗಿ ಓಡಾಡುವ ಫಿಲಿಪ್ಸ್‌ ಹೆಸರನ್ನು ಸಲಹೆ ಮಾಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.