ವಿಜಯ್ ಹಜಾರೆ ಟ್ರೋಫಿ: ದೇವದತ್ತ ಅಬ್ಬರದ ಆಟ; ಕರ್ನಾಟಕ ಅಜೇಯ ಓಟ ಅಹಮದಾಬಾದ್: ದೇವದತ್ತ ಪಡಿಕ್ಕಲ್ ಅಬ್ಬರದ ಬ್ಯಾಟಿಂಗ್ ಬಲದಿಂದ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಸಿ ಗುಂಪಿನಲ್ಲಿ ಅಜೇಯ ಓಟ ಮುಂದುವರಿಸಿತು. ನರೇಂದ್ರ ಮೋದಿ ಕ್ರೀಡಾಂಗಣದ ಎ ಗ್ರೌಂಡ್‌ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡವು 7 ವಿಕೆಟ್‌ಗಳಿಂದ ಬಿಹಾರ ಎದುರು ಜಯಿಸಿತು. ಇದರೊಂದಿಗೆ ಟೂರ್ನಿಯಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸಿತು. ಆದರೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕರ್ನಾಟಕಕ್ಕಿಂತ (+2.643) ನೆಟ್‌ ರನ್‌ರೇಟ್‌ನಲ್ಲಿ ಸ್ವಲ್ಪ ಹೆಚ್ಚಿರುವ ಹರಿಯಾಣ (+2.674) ಮೊದಲ ಸ್ಥಾನದಲ್ಲಿದೆ. ಟಾಸ್ ಗೆದ್ದ ಕರ್ನಾಟಕ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬಿಹಾರ ತಂಡದ ಶಕಿಬುಲ್ ಗನಿ (ಔಟಾಗದೆ 113; 100ಎ, 4X9, 6X5) ಅವರ ಏಕಾಂಗಿ ಹೋರಾಟದ ಶತಕದಿಂದಾಗಿ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 217 ರನ್ ಗಳಿಸಿತು. ಕರ್ನಾಟಕದ ಸ್ಪಿನ್ನರ್ ಜೆ. ಸುಚಿತ್ ಮೂರು ವಿಕೆಟ್ ಗಳಿಸಿದರು. ಬಾಬುಲ್ ಕುಮಾರ್ ಅವರು ರನ್‌ ಔಟ್ ಆಗಲೂ ಸುಚಿತ್ ಚುರುಕಿನ ಫೀಲ್ಡಿಂಗ್ ಕಾರಣವಾಯಿತು. ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಮೊದಲ ಓವರ್‌ನಲ್ಲಿ ಆರ್. ಸಮರ್ಥ್ ಔಟಾದರು. ನಿಕಿನ್ ಜೋಸ್ ಮತ್ತು ಮಯಂಕ್ ಅಗರವಾಲ್ ಎರಡನೇ ವಿಕೆಟ್ ಜೊತೆಯಾಟದಲ್ಲಿ 71 ರನ್ ಗಳಿಸಿದರು. 16ನೇ ಓವರ್‌ನಲ್ಲಿ ಆಷುತೋಷ್ ಅಮನ್ ಬೌಲಿಂಗ್‌ನಲ್ಲಿ ಮಯಂಕ್ ಔಟಾದಾಗ ಜೊತೆಯಾಟ ಮುರಿಯಿತು. ಕ್ರೀಸ್‌ಗೆ ಬಂದ ದೇವದತ್ತ ಪಡಿಕ್ಕಲ್ ಬೀಸಾಟ ಆರಂಭಿಸಿದರು. ಕಳೆದ ಮೂರು ಪಂದ್ಯದಲ್ಲಿ ಎರಡು ಅರ್ಧಶತಕ ಮತ್ತು ಒಂದು ಶತಕ ಹೊಡೆದಿದ್ದ ದೇವದತ್ತ ಈ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿದರು. ಕೇವಲ 57 ಎಸೆತಗಳಲ್ಲಿ ಅಜೇಯ 93 ರನ್‌ ಗಳಿಸಿದರು. ಅದರಲ್ಲಿ 9 ಬೌಂಡರಿ ಮತ್ತು ಐದು ಸಿಕ್ಸರ್‌ಗಳಿದ್ದವು. ದೇವದತ್ತ ಮತ್ತು ನಿಕಿನ್ ಮೂರನೇ ವಿಕೆಟ್ ಜೊತೆಯಾಟದಲ್ಲಿ 71 ರನ್‌ ಗಳಿಸಿದರು. 26ನೇ ಓವರ್‌ನಲ್ಲಿ ನಿಕಿನ್ ಅವರು ಆರ್‌. ಪ್ರತಾಪ್ ಸಿಂಗ್ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ನಂತರದ ಆಟದಲ್ಲಿ ದೇವದತ್ತ ಮತ್ತು ಅನುಭವಿ ಮನೀಷ್ ಪಾಂಡೆ (ಔಟಾಗದೆ 17) ತಂಡವನ್ನು ಗೆಲುವಿನ ದಡ ಸೇರಿಸಿದರು. ಭಾರತ ತಂಡದ ಕದ ತಟ್ಟುತ್ತಿರುವ ದೇವದತ್ತಗೆ ಈ ಪಂದ್ಯದಲ್ಲಿ ಏಳು ರನ್‌ ಅಂತರದಿಂದ ಶತಕ ಕೈತಪ್ಪಿತು. ನಾಲ್ಕು ಪಂದ್ಯಗಳಿಂದ 351 ರನ್ ಗಳಿಸಿರುವ ಅವರು ಹೆಚ್ಚು ರನ್ ಗಳಿಸಿರುವ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. ಸಂಕ್ಷಿಪ್ತ ಸ್ಕೋರು: ಬಿಹಾರ: 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 217 (ಶರ್ಮನ್ ನಿಜ್ರೊದ್ 21, ಶಕೀಬುಲ್ ಗನಿ ಔಟಾಗದೆ 113, ಆಷುತೋಷ್ ಅಮನ್ ಔಟಾಗದೆ 33,ಜೆ. ಸುಚಿತ್ 27ಕ್ಕೆ3) ಕರ್ನಾಟಕ: 33.4 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 218 (ಮಯಂಕ್ ಅಗರವಾಲ್ 28, ನಿಕಿನ್ ಜೋಸ್ 69, ದೇವದತ್ತ ಪಡಿಕ್ಕಲ್ ಔಟಾಗದೆ 93, ವೀರ್‌ಪ್ರತಾಪ್ ಸಿಂಗ್ 31ಕ್ಕೆ1, ಆಷುತೋಷ್ ಅಮನ್ 36ಕ್ಕೆ1) ಫಲಿತಾಂಶ: ಕರ್ನಾಟಕ ತಂಡಕ್ಕೆ 7 ವಿಕೆಟ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.