ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಬಿಹಾರ ಸವಾಲು ಅಹಮದಾಬಾದ್: ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಸಿ ಗುಂಪಿನಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದಿರುವ ಕರ್ನಾಟಕ ಬುಧವಾರ ನಡೆಯಲಿರುವ ಬಿಹಾರ ಎದುರಿನ ಹಣಾಹಣಿಯಲ್ಲಿಯೂ ಅಜೇಯ ಓಟ ಮುಂದುವರಿಸುವ ಛಲದಲ್ಲಿದೆ. ಕಳೆದ ಪಂದ್ಯದಲ್ಲಿ ದೆಹಲಿ ವಿರುದ್ಧ ಕರ್ನಾಟಕದ ವಿದ್ವತ್ ಕಾವೇರಪ್ಪ, ವಿ. ಕೌಶಿಕ್ ಮತ್ತು ವೈಶಾಖ ವಿಜಯಕುಮಾರ್ ಅವರು ಮಿಂಚಿದ್ದರು. ದೆಹಲಿ ತಂಡವು ಸಣ್ಣ ಗುರಿಯನ್ನು ಒಡ್ಡಿತ್ತು. ಬ್ಯಾಟಿಂಗ್‌ನಲ್ಲಿಯೂ ಕರ್ನಾಟಕ ಬಲಾಢ್ಯವಾಗಿದೆ. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಮಯಂಕ್ ಅಗರವಾಲ್ ಮತ್ತು ಆರ್. ಸಮರ್ಥ್ ನಂತರದ ಎರಡು ಪಂದ್ಯಗಳಲ್ಲಿ ಹೆಚ್ಚು ರನ್ ಗಳಿಸಿಲ್ಲ. ಆದರೆ ದೇವದತ್ತ ಪಡಿಕ್ಕಲ್ ಎರಡು ಅರ್ಧತತಕ ಮತ್ತು ಒಂದು ಶತಕ ಗಳಿಸಿದ್ದಾರೆ. ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಬಿಹಾರ ತಂಡವೂ ಮೂರು ಪಂದ್ಯಗಳನ್ನು ಆಡಿದೆ. ಆದರೆ ಎರಡರಲ್ಲಿ ಸೋತಿತ್ತು. ಒಂದು ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಹಾಗಾಗಿ ಎರಡು ಅಂಕ ಪಡೆದಿದೆ. ಕರ್ನಾಟಕ ತಂಡಕ್ಕೆ ಸಮಬಲದ ಪೈಪೋಟಿಯು ನೀಡುವಷ್ಟು ಅನುಭವಿ ಆಟಗಾರರು ಬಿಹಾರ ತಂಡದಲ್ಲಿ ಇಲ್ಲ. ಆದ್ದರಿಂದ ಈ ಪಂದ್ಯದಲ್ಲಿ ಸುಲಭ ಜಯ ಸಾಧಿಸುವತ್ತ ಕರ್ನಾಟಕ ದೃಷ್ಟಿ ನೆಟ್ಟಿದೆ. ಬಿಹಾರ ತಂಡದಲ್ಲಿರುವ ಆಲ್‌ರೌಂಡರ್ ವಿ. ಪ್ರತಾಪ್ ಸಿಂಗ್ ಉತ್ತಮ ಲಯದಲ್ಲಿದ್ದಾರೆ. ಅವರೊಬ್ಬರೆ ಕಳೆದ ಮೂರು ಪಂದ್ಯಗಳಲ್ಲಿ ಗಮನ ಸೆಳೆದಿರುವ ಆಟಗಾರ. ಉಳಿದ ಬ್ಯಾಟರ್‌ಗಳು ಮತ್ತು ಬೌಲರ್‌ಗಳು ಎದುರಾಳಿಗಳಿಗೆ ಕಠಿಣ ಪೈಪೋಟಿಯೊಡ್ಡುವಲ್ಲಿ ಸಫಲರಾಗಿಲ್ಲ. ಮಯಂಕ್ ಬಳಗವು ಬಿಹಾರ ತಂಡಕ್ಕಿಂತ ಹೆಚ್ಚು ಬಲಾಢ್ಯವಾಗಿದೆ. ಆದ್ದರಿಂದ ತಂಡವು ಗೆಲ್ಲುವ ಸಾಧ್ಯತೆಯೂ ಹೆಚ್ಚಿದೆ. ಪಂದ್ಯ ಆರಂಭ: ಬೆಳಿಗ್ಗೆ 9 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.