ವಿಜಯ್ ಹಜಾರೆ ಟ್ರೋಫಿ: ಹರಿಯಾಣ ರಾಜಸ್ಥಾನ ಫೈನಲ್ ರಾಜ್‌ಕೋಟ್: ಹರಿಯಾಣ ಮತ್ತು ರಾಜಸ್ಥಾನ ತಂಡಗಳು ಶನಿವಾರ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಹಣಾಹಣಿ ನಡೆಸಲಿವೆ. ಉಭಯ ತಂಡಗಳೂ ಚೊಚ್ಚಲ ಪ್ರಶಸ್ತಿ ಜಯಿಸುವ ಛಲದಲ್ಲಿವೆ. ಅಶೋಕ್ ಮನೇರಿಯಾ ನಾಯಕತ್ವದ ಹರಿಯಾಣ ತಂಡವು ಸೆಮಿಫೈನಲ್‌ನಲ್ಲಿ ತಮಿಳುನಾಡು ತಂಡವನ್ನು ಸೋಲಿಸಿತ್ತು. ಆ ಪಂದ್ಯದಲ್ಲಿ ಹಿಮಾಂಶು ರಾಣಾ ಭರ್ಜರಿ ಶತಕ ಹೊಡೆದಿದ್ದರು. ತಂಡದ ಬೌಲಿಂಗ್‌ ವಿಭಾಗದಲ್ಲಿ ಅನ್ಷುಲ್ ಕಾಂಬೋಜ್, ರಾಹುಲ್ ತೆವಾಟಿಯಾ, ಹರ್ಷಲ್ ಪಟೇಲ್ ಮತ್ತು ಅನುಭವಿ ಸ್ಪಿನ್ನರ್ ಯಜುವೇಂದ್ರ ಚಾಹಲ್ ಇದ್ದಾರೆ. ಇನ್ನೊಂದು ಸೆಮಿಫೈನಲ್‌ನಲ್ಲಿ ರಾಜಸ್ಥಾನ ತಂಡವು ಕರ್ನಾಟಕವನ್ನು ಸೋಲಿಸಿತ್ತು. ತಂಡದ ನಾಯಕ ದೀಪಕ್ ಹೂಡಾ ಸಿಡಿಲಬ್ಬರದ ಶತಕ ದಾಖಲಿಸಿದ್ದರು. ಎಡಗೈ ವೇಗಿ ಖಲೀಲ್ ಅಹಮದ್, ಸ್ಪಿನ್ನರ್ ರಾಹುಲ್ ಚಾಹರ್ ಮತ್ತು ಅರಾಫತ್ ಖಾನ್ ಈ ತಂಡದ ಬೌಲಿಂಗ್ ಶಕ್ತಿಯಾಗಿದ್ದಾರೆ. ಮೇಲ್ನೋಟಕ್ಕೆ ಸಮಬಲದ ತಂಡಗಳಾಗಿ ಕಾಣುತ್ತಿವೆ. ಇದರಿಂದಾಗಿ ರೋಚಕ ಹಣಾಹಣಿ ನಡೆಯುವ ನಿರೀಕ್ಷೆ ಇದೆ. ಪಂದ್ಯ ಆರಂಭ: ಮಧ್ಯಾಹ್ನ 1.30 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.