ಆತ್ಮವಿಶ್ವಾಸಕ್ಕೆ ಇಸ್ತ್ರಿ ಹಾಕಿದ ರಿಂಕು ಸಿಂಗ್ ಕ್ರಿಕೆಟ್‌ನ ಅಧ್ಯಾಯಗಳು ಎಷ್ಟು ಚಕಚಕನೆ ಸಾಗುತ್ತವೆ. ಮೊನ್ನೆಯಷ್ಟೆ ಭಾರತ ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಸೋತಿತು. ಆ ಕಹಿ ಮಾಸುವ ಹೊತ್ತಿಗಾಗಲೇ ಟ್ವೆಂಟಿ20 ಕ್ರಿಕೆಟ್‌ ಸರಣಿ. ಮತ್ತೆ ಎದುರಲ್ಲಿ ಆಸ್ಟ್ರೇಲಿಯಾ. ಭಾರತದ ಅನುಭವಿ ಬ್ಯಾಟರ್‌ಗಳಿಗೆಲ್ಲ ವಿಶ್ರಾಂತಿ. ಹೊಸ ಹುಡುಗರಿಗೆ ಛಾಪು ಮೂಡಿಸಲೊಂದು ವೇದಿಕೆ. ಔಟಾಗದೆ 68, 6, 46, ಔಟಾಗದೆ 31, ಔಟಾಗದೆ 22 – ಟ್ವೆಂಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರಿಂಕು ಸಿಂಗ್‌ ಇತ್ತೀಚಿನ ವೈಯಕ್ತಿಕ ಸ್ಕೋರ್‌ಗಳು ಹೀಗಿವೆ. ಔಟಾಗದೆ ಅವರು 68 ರನ್‌ ಗಳಿಸಿದ್ದು ದಕ್ಷಿಣ ಆಫ್ರಿಕಾದ ಸೇಂಟ್‌ ಜಾರ್ಜ್ ಪಾರ್ಕ್‌ನ ಪಿಚ್‌ನಲ್ಲಿ. ಉಳಿದ ಇನಿಂಗ್ಸ್‌ಗಳು ಭಾರತದ ನೆಲದಲ್ಲಿ ಬಂದಿದ್ದವು. ದಕ್ಷಿಣ ಆಫ್ರಿಕಾದ ನೆಲದಲ್ಲಿ ಆಡುವಾಗ ಬ್ಯಾಕ್‌ಫುಟ್‌ನಲ್ಲಿ ನಿಂತು, ಚೆಂಡಿನ ದಿಕ್ಕುದಿಸೆಯನ್ನು ಅರಿಯಲು ತುಸು ತಾಳ್ಮೆಯಿಂದ ಕಾಯಬೇಕಾಗುತ್ತದೆ. ನಿಧಾನಗತಿಯ ಬೌನ್ಸರ್‌ಗಳು ಕೆಣಕುವಂತೆ ಇರುತ್ತವೆ. ಆ ಪಂದ್ಯದಲ್ಲಿ ಭಾರತದ ಮೇಲಿನ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳು ಬೇಗನೆ ಔಟಾಗಿದ್ದರು. ಆಗ ನಾಯಕ ಸೂರ್ಯಕುಮಾರ್‌ ಯಾದವ್‌ ಒಂದು ತುದಿಯಲ್ಲಿ ಇದ್ದರು. ಐದನೇ ಬ್ಯಾಟ್ಸ್‌ಮನ್‌ ಆಗಿ ಇನ್ನೊಂದು ತುದಿಯಲ್ಲಿ ರಿಂಕು. ಸೂರ್ಯ ಲೀಲಾಜಾಲವಾಗಿ ಆಡುತ್ತಿದ್ದರೆ, ರಿಂಕು ಮೊದಲ ಹದಿನೈದು ನಿಮಿಷ ತಡಕಾಡಿದರು. ಎರಡು ಸಲ ಅವರು ರಿವರ್ಸ್‌ ಸ್ವೀಪ್‌ಗೆ ಯತ್ನಿಸಿ ವಿಫಲರಾದರು. ಒಮ್ಮೆಯಂತೂ ಎದುರಾಳಿ ತಂಡದಿಂದ ಸ್ಟಂಪಿಂಗ್‌ ಅಪೀಲ್‌ ಕೂಡ ಕೇಳಿಬಂದಿತ್ತು. ಅದೃಷ್ಟವಶಾತ್ ರಿಂಕು ಔಟಾಗದೇ ಕ್ರೀಸ್‌ನಲ್ಲಿ ಉಳಿದುಕೊಂಡರು. ಆ ಹಂತದಲ್ಲಿ ಆಫ್‌ಸೈಟ್‌ನತ್ತ ಅವರು ಮಾಡಿದ ಒಂದು ಅರೆ ಕಟ್‌ ಮಾದರಿಯ ಹೊಡೆತ ಚಿತ್ತಾಕರ್ಷಕವಾಗಿತ್ತು. ಹತ್ತಿರದಲ್ಲಿಯೇ ನಿಂತಿದ್ದ ಫೀಲ್ಡರ್‌ ಕೈಗೆ ಚೆಂಡು ಸಿಗದಂತೆ ಅದಕ್ಕೆ ದಿಕ್ಕು ತೋರಿಸುವ ಜಾಣತನದ ಹೊಡೆತ ಅದು. ಕೊನೆಯ ಕ್ಷಣದವರೆಗೆ ಕಾದು ಆಡಿದರೆ ಸಿಗುವ ಸತ್ಫಲಕ್ಕೆ ಅದು ಉದಾಹರಣೆ. 39 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್‌ ಸೇರಿದ್ದ ಇನಿಂಗ್ಸ್‌ ಕಟ್ಟಿದ್ದು ಗಮನಾರ್ಹ. ಅವರು ಹೊಡೆದಿದ್ದ ಒಂದು ಸಿಕ್ಸರ್‌ನಿಂದ ಚೆಂಡು ಗಾಜನ್ನು ಪುಡಿಮಾಡಿತ್ತು. ‘ಗಾಜು ಒಡೆಯಿತೆನ್ನುವುದು ಆಮೇಲೆ ತಿಳಿಯಿತು. ಪ್ರಾಪರ್ಟಿ ಹಾಳುಮಾಡಿದ್ದಕ್ಕಾಗಿ ಸಾರಿ’ ಎಂದು ರಿಂಕು ಪಂದ್ಯದ ನಂತರ ಕ್ಷಮೆ ಕೇಳುವ ಹಾಸ್ಯದ ಧಾಟಿಯ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದರು. ಆಸ್ಟ್ರೇಲಿಯಾ ಎದುರು ರಾಯ್‌ಪುರದಲ್ಲಿ ನಡೆದ ಕೊನೆಯ ಟ್ವೆಂಟಿ20 ಪಂದ್ಯದಲ್ಲಿ ಇನ್ನೊಬ್ಬ ಹೊಸಬ, ವಿಕೆಟ್‌ ಕೀಪರ್‌ ಕೂಡ ಆಗಿರುವ ಜಿತೇಶ್‌ ಆಡಲು ಇಳಿದರು. ಸಹಜವಾಗಿಯೇ ಅವರು ಭೀತರಾಗಿದ್ದರು. ರಿಂಕು ಅವರಿಗೆ ಧೈರ್ಯ ತುಂಬಿದರು. ‘ಆರಾಮವಾಗಿ ನಿನ್ನ ಆಟವನ್ನು ಆಡು. ತಣ್ಣಗೆ ಇರು’ ಎಂದು ಅವರು ಹೇಳಿದ್ದನ್ನು ಪಂದ್ಯದ ನಂತರ ಜಿತೇಶ್ ನೆನಪಿಸಿಕೊಂಡರು. ರಿಂಕು ಅಷ್ಟು ತಣ್ಣಗೆ ಆಡುತ್ತಲೇ ತಮಗೂ ಪಾಠ ಹೇಳಿದ್ದಕ್ಕೆ ಅವರು ಉದಾಹರಣೆಗಳನ್ನೂ ಕೊಟ್ಟರು. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟ್ವೆಂಟಿ20 ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್ ಪಾಠವನ್ನು ರಿಂಕು ಕೇಳಿದ್ದರು. ಅದಕ್ಕೆ ಹಿಂದಿನ ಪಂದ್ಯದಲ್ಲಿ ಜಿತೇಶ್‌ಗೆ ಖುದ್ದು ಅವರೇ ಪಾಠ ಹೇಳಿದ್ದರು. ಇವೆರಡೂ ಉದಾಹರಣೆಗಳು ಭಾರತ ತಂಡದ ಯುವಶಕ್ತಿಯ ಆತ್ಮಬಲ ಹೇಗೆಲ್ಲ ವರ್ಧಿಸುತ್ತಿದೆ ಎನ್ನುವುದಕ್ಕೆ ಅನುಕರಣೀಯ ಮಾದರಿಯಂತಿವೆ. ರಿಂಕು ಉತ್ತರ ಪ್ರದೇಶದವರು. ಈ ರಾಜ್ಯದ ಹೆಸರೆತ್ತಿದರೆ ಸುರೇಶ್ ರೈನಾ ನೆನಪಾಗುತ್ತದೆ. ಜೊತೆಗೆ ಅವರ ಖದರಿಯ ಎಡಗೈ ಬ್ಯಾಟಿಂಗ್‌. ಭಾರತ ಕ್ರಿಕೆಟ್‌ ತಂಡದಲ್ಲಿ ಎಡಗೈ ಬ್ಯಾಟರ್‌ ಮಧ್ಯಮ ಕ್ರಮಾಂಕದಲ್ಲಿ ಇರಬೇಕು ಎಂಬ ಸಲಹೆ ಇತ್ತೀಚೆಗೆ ಭಾರತದ ಪಾಳಯದಲ್ಲಿ ಕೇಳಿಬಂದಿತ್ತು. ರಿಂಕು ಉಪಸ್ಥಿತಿ ಹಾಗೂ ಅವರು ಅಂಗಳದಲ್ಲಿ ತೋರುತ್ತಿರುವ ಸಂಯಮ ಬೆರೆತ ದಾಳಿಕೋರತನ ಆ ಸಲಹೆ ಈಡೇರಿದೆ ಎಂಬ ಭಾವನೆಯನ್ನಂತೂ ಮೂಡಿಸುತ್ತಿದೆ. ಚುಟುಕು ಕ್ರಿಕೆಟ್‌ ಅಲ್ಲದೆ ಏಕದಿನ ಪಂದ್ಯದಲ್ಲಿ ರಿಂಕು ಅವಕಾಶ ಸಿಕ್ಕಮೇಲೆ ಹೇಗೆ ಆಡುವರೋ ಎನ್ನುವುದನ್ನು ನೋಡಿದ ಮೇಲೆ ಈ ಭಾವನೆಗೆ ಅಡಿಗೆರೆ ಎಳೆಯಬಹುದು. ಅಲಿಗಡದ ರಿಂಕು ಕುಟುಂಬ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ ತುಂಬಿಸುವ ಸ್ಥಳಕ್ಕೆ ಹೊಂದಿಕೊಂಡ ಪ್ರದೇಶದ ಕ್ವಾರ್ಟರ್ಸ್‌ನಲ್ಲಿ ವಾಸವಿದ್ದದ್ದು. ಕ್ರಿಕೆಟ್‌ ಹುಚ್ಚಿನಿಂದ ಕುಟುಂಬ ಸಾಕಷ್ಟು ಸಾಲ ಮಾಡಿತ್ತು. ಐಪಿಎಲ್‌ನಲ್ಲಿ ಆಡುವ ಅವಕಾಶ ಸಿಕ್ಕಮೇಲೆ ಆ ಸಾಲ ಕರಗಿದ್ದು. 2016ರ ನವೆಂಬರ್‌ನಲ್ಲಿ ಉತ್ತರ ಪ್ರದೇಶದ ಪರವಾಗಿ ರಣಜಿ ಆಡುವ ಅವಕಾಶ ರಿಂಕು ಅವರಿಗೆ ಸಿಕ್ಕಿದ್ದು. 2018–19ರ ರಣಜಿಯ ಗುಂಪು ಹಂತದ ಪಂದ್ಯಗಳಲ್ಲಿಯೇ ಅವರು 803 ರನ್‌ ಹೆಕ್ಕಿದ ನೆನಪು ಕ್ರಿಕೆಟ್‌ ಸೂಕ್ಷ್ಮಗಳನ್ನು ಗಮನಿಸುವವರಿಗೆ ಖಂಡಿತ ಇರುತ್ತದೆ. ಇದರರ್ಥ: ಅವರು ಆಗಿನಿಂದಲೇ ಕಲಿತ ಕ್ರಿಕೆಟ್‌ ಪಾಠಗಳು ಈಗ ನಮ್ಮ ಕಣ್ಣಿಗೆ ಕಾಣುತ್ತಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.