ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್: ಪಾಕ್ ತಂಡದ ಹೋರಾಟ ಪರ್ತ್‌: ಪದಾರ್ಪಣೆ ಪಂದ್ಯದಲ್ಲಿ ವೇಗದ ಜೊತೆಗೆ ವಿಶ್ವಾಸದಿಂದ ಬೌಲ್‌ ಮಾಡಿದ ಅಮಿರ್ ಜಮಾಲ್ ಆರು ವಿಕೆಟ್‌ಗಳನ್ನು ಪಡೆದರು. ಪಾಕಿಸ್ತಾನ ತಂಡ ಅವರ ಉತ್ತಮ ಬೌಲಿಂಗ್‌ ನೆರವಿನಿಂದ ಪರ್ತ್‌ನಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್‌ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶುಕ್ರವಾರ ಆಸ್ಟ್ರೇಲಿಯಾ ತಂಡವನ್ನು 487 ರನ್‌ಗಳಿಗೆ ಆಲೌಟ್‌ ಆಡಿತು. ದಿನದಾಟ ಮುಗಿದಾಗ ಪಾಕಿಸ್ತಾನ ತಂಡ ಎಚ್ಚರಿಕೆಯ ಆರಂಭ ಮಾಡಿದ್ದು 53 ಓವರುಗಳನ್ನಾಡಿದ್ದು 2 ವಿಕೆಟ್‌ಗೆ 132 ರನ್ ಗಳಿಸಿದೆ. ಆರಂಭ ಆಟಗಾರ ಅಬ್ದುಲ್ಲಾ ಶಫೀಖ್ 42 ರನ್‌ ಗಳಿಸಿದರು. ಪ್ರವಾಸಿ ತಂಡ ಇನಿಂಗ್ಸ್ ಬಾಕಿ ತೀರಿಸಲು ಇನ್ನೂ 355 ರನ್ ಗಳಿಸಬೇಕಾಗಿದೆ. ಇದಕ್ಕೆ ಮೊದಲು, ಮಿಚೆಲ್ ಮಾರ್ಷ್ ಅವರ 90 ರನ್‌ಗಳ ನೆರವಿನಿಂದ ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್‌ ಮೊತ್ತ ಉಬ್ಬಿತು. ಮೊದಲ ದಿನ ಡೇವಿಡ್ ವಾರ್ನರ್ 164 ರನ್ ಹೊಡೆದಿದ್ದರು. 15 ರನ್‌ಗಳಿಂದ ಎರಡನೇ ದಿನದಾಟ ಮುಂದುವರಿಸಿದ ಮಾರ್ಷ್‌ ಊಟಕ್ಕೆ ಮೊದಲಿನ ಅವಧಿಯಲ್ಲಿ ಉತ್ತಮವಾಗಿ ಆಡಿದರು. 15 ಬೌಂಡರಿ, ಒಂದು ಭರ್ಜರಿ ಸಿಕ್ಸರ್ ಅವರ ಇನಿಂಗ್ಸ್‌ನಲ್ಲಿತ್ತು. 27 ವರ್ಷದ ಜಮಾಲ್ ಜೊತೆ ಪದಾರ್ಪಣೆ ಮಾಡಿದ ಇನ್ನೊಬ್ಬ ವೇಗಿ ಖುರ‍್ರಂ ಶಹಜಾದ್, ಲಂಚ್‌ ನಂತರ ಮೊದಲ ಎಸೆತದಲ್ಲೇ ಮಾರ್ಷ್ ವಿಕೆಟ್ ಪಡೆದರು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಆಸ್ಟ್ರೇಲಿಯಾ: 113.2 ಓವರುಗಳಲ್ಲಿ 487 (ಡೇವಿಡ್‌ ವಾರ್ನರ್ 164, ಟ್ರಾವಿಸ್‌ ಹೆಡ್‌ 40, ಮಿಚೆಲ್ ಮಾರ್ಷ್ 90, ಅಲೆಕ್ಸ್ ಕ್ಯಾರಿ 34; ಜಮಾಲ್ 111ಕ್ಕೆ6); ಪಾಕಿಸ್ತಾನ: 53 ಓವರುಗಳಲ್ಲಿ 2 ವಿಕೆಟ್‌ಗೆ 132 (ಅಬ್ದುಲ್ಲಾ ಶಫೀಕ್ 42, ಇಮಾಂ ಉಲ್ ಹಕ್ ಔಟಾಗದೇ 38, ಶಾನ್‌ ಮಸೂದ್ 30) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.