ಟೆಸ್ಟ್ ಕ್ರಿಕೆಟ್: ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡದಲ್ಲಿ 3 ಹೊಸಮುಖಗಳು ಲಂಡನ್: 20 ವರ್ಷದ ಸ್ಪಿನ್ನರ್ ಶೋಯೆಬ್ ಬಶೀರ್ ಅವರು, ಐದು ಟೆಸ್ಟ್‌ ಪಂದ್ಯಗಳ ಸರಣಿಗಾಗಿ ಭಾರತ ಪ್ರವಾಸ ಕೈಗೊಳ್ಳುವ 16 ಸದಸ್ಯರ ಇಂಗ್ಲೆಂಡ್‌ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರ ಜೊತೆ ವೇಗದ ಬೌಲರ್ ಗಸ್ ಅಟ್ಕಿನ್ಸನ್ ಮತ್ತು ಸ್ಪಿನ್ನರ್‌ ಟಾಮ್‌ ಹಾರ್ಟ್ಲಿ ಅವರೂ ಮೊದಲ ಬಾರಿ ಸ್ಥಾನ ಪಡೆದಿದ್ದಾರೆ. ಬಶೀರ್‌ ಜೂನ್‌ನಲ್ಲಷ್ಟೇ ಸಾಮರ್ಸೆಟ್‌ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅವರು ತಂಡಕ್ಕೆ ಆಯ್ಕೆಯಾಗಿರುವ ನಾಲ್ವರು ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿದ್ದಾರೆ. ಗಾಯಾಳಾಗಿದ್ದ ಉಪ ನಾಯಕ ಓಲಿ ಪೋಪ್ ಮತ್ತು ಜಾಕ್‌ ಲೀಚ್ ಅವರು ತಂಡಕ್ಕೆ ಮರಳಿದ್ದಾರೆ. ಅಟ್ಕಿನ್ಸನ್ ಮತ್ತು ಎಡಗೈ ಸ್ಪಿನ್ನರ್‌ ಹಾರ್ಟ್ಲಿ ಈಗಾಗಲೇ ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಪರ ಆಡಿದ್ದಾರೆ. ಆದರೆ ಟೆಸ್ಟ್‌ ಆಡಿಲ್ಲ. ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬೆನ್ ಸ್ಟೋಕ್ಸ್‌ ಚೇತರಿಸಿಕೊಂಡಿದ್ದು ತಂಡದ ನಾಯಕರಾಗಿದ್ದಾರೆ. ವಿಕೆಟ್‌ ಕೀಪರ್ ಬೆನ್‌ ಫೋಕ್ಸ್‌ ಈ ಸರಣಿಗೆ ಆಯ್ಕೆಯಾಗಿದ್ದಾರೆ. ಅವರು ಆ್ಯಷಸ್‌ ಸರಣಿಗೆ ಅವಕಾಶ ಪಡೆದಿರಲಿಲ್ಲ. ಆಸ್ಟ್ರೇಲಿಯಾ ವಿರುದ್ಧ 2–2 ರಲ್ಲಿ ಸಮಬಲಗೊಂಡಿದ್ದ ಆ ಸರಣಿಯಲ್ಲಿ ‘ಸರಣಿ ಶ್ರೇಷ್ಠ’ರಾಗಿದ್ದ ಕ್ರಿಸ್‌ ವೋಕ್ಸ್‌ ಅವರು ಸ್ಥಾನ ಪಡೆದಿಲ್ಲ. ಟೆಸ್ಟ್‌ಗಳಲ್ಲಿ ಇಂಗ್ಲೆಂಡ್ ಪರ ಅತ್ಯಧಿಕ ವಿಕೆಟ್‌ಗಳನ್ನು ಪಡೆದಿರುವ 41 ವರ್ಷದ ಜೇಮ್ಸ್ ಆ್ಯಂಡರ್ಸನ್ ಅವರು, ಮಾರ್ಕ್ ವುಡ್ ಮತ್ತು ಓಲಿ ರಾಬಿನ್ಸನ್ ಅವರೊಡನೆ ವೇಗದ ದಾಳಿಯ ಭಾಗವಾಗಿದ್ದಾರೆ. ಮೊದಲ ಟೆಸ್ಟ್ ಪಂದ್ಯ ಜನವರಿ 25ರಂದು ಹೈದರಾಬಾದ್‌ನಲ್ಲಿ ಆರಂಭವಾಗಲಿದೆ. ಬೆನ್‌ ಸ್ಟೋಕ್ಸ್‌ (ನಾಯಕ), ರೆಹಾನ್‌ ಅಹ್ಮದ್, ಜೇಮ್ಸ್‌ ಆ್ಯಂಡರ್ಸನ್, ಗಸ್ ಅಟ್ಕಿನ್ಸನ್, ಜಾನಿ ಬೇಸ್ಟೊ, ಶೋಯೆಬ್ ಬಶೀರ್, ಹ್ಯಾರಿ ಬ್ರೂಕ್, ಜಾಕ್ ಕ್ರಾಲಿ, ಬೆನ್ ಡಕೆಟ್‌, ಬೆನ್ ಫೋಕ್ಸ್‌, ಟಾಮ್‌ ಹಾರ್ಟ್ಲಿ, ಜಾಕ್ ಲೀಚ್‌, ಓಲಿ ಪೋಪ್, ಓಲಿ ರಾಬಿನ್ಸನ್, ಜೋ ರೂಟ್ ಮತ್ತು ಮಾರ್ಕ್ ವುಡ್‌. ವೇಳಾಪಟ್ಟಿ ಮೊದಲ ಟೆಸ್ಟ್‌: ಜ. 25 ರಿಂದ 29, ಹೈದರಾಬಾದ್ ಎರಡನೆ ಟೆಸ್ಟ್‌: ಫೆ 2 ರಿಂದ 6, ವಿಶಾಖಪಟ್ಟಣ ಮೂರನೇ ಟೆಸ್ಟ್‌: ಫೆ. 15ರಿಂದ 19, ರಾಜಕೋಟ್‌ ನಾಲ್ಕನೇ ಟೆಸ್ಟ್‌: ಫೆ. 23 ರಿಂದ 27, ರಾಂಚಿ ಐದನೇ ಟೆಸ್ಟ್‌: ಮಾರ್ಚ್ 7 ರಿಂದ 11, ಧರ್ಮಶಾಲಾ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.