ಟಿ20 ಕ್ರಿಕೆಟ್: ಭಾರತಕ್ಕೆ ಸರಣಿ ಸಮಬಲದ ಛಲ ಜೋಹಾನ್ಸ್‌ಬರ್ಗ್ : ಸರಣಿ ಜಯದ ಕನಸು ಕಾಣುತ್ತಿರುವ ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಸಮಬಲ ಸಾಧನೆಯ ಛಲದಲ್ಲಿರುವ ಭಾರತ ತಂಡ ಗುರುವಾರ ಇಲ್ಲಿ ಮುಖಾಮುಖಿಯಾಗಲಿವೆ. ಮೂರು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯವು ಮಳೆಗಾಹುತಿಯಾಗಿತ್ತು. ಮಂಗಳವಾರ ನಡೆದಿದ್ದ ಎರಡನೇ ಪಂದ್ಯಕ್ಕೂ ಮಳೆ ಆಡ್ಡಿಯಾಗಿತ್ತು. ಆದರೆ ಡಕ್ವರ್ಥ್ ಲೂಯಿಸ್ ನಿಯಮದನ್ವಯ ನಿಗದಿಯಾದ ಗುರಿಯನ್ನು ಮುಟ್ಟುವಲ್ಲಿ ಯಶಸ್ವಿಯಾದ ಆತಿಥೇಯ ತಂಡವು 5 ವಿಕೆಟ್‌ಗಳಿಂದ ಗೆದ್ದಿತ್ತು. ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತ್ತು. ಹೀಗಾಗಿ ಮೂರನೇ ಪಂದ್ಯದಲ್ಲಿ ಜಯಿಸಿದರೆ ಸರಣಿ ಒಲಿಯಲಿದೆ ಎಂಬ ಲೆಕ್ಕಾಚಾರ ಏಡನ್ ಮರ್ಕರಂ ಬಳಗದ್ದು. ಆದರೆ,ಸರಣಿ ಸೋಲಿನಿಂದ ತಪ್ಪಿಸಿಕೊಂಡು ಸಮಬಲ ಸಾಧಿಸಬೇಕಾದರೆ ಭಾರತ ತಂಡದ ಬೌಲರ್‌ಗಳು ಉತ್ತಮವಾಗಿ ಆಡಬೇಕಿದೆ. ಎರಡನೇ ಪಂದ್ಯದಲ್ಲಿ ಮುಕೇಶ್ ಕುಮಾರ್ ಎರಡು ವಿಕೆಟ್ ಪಡೆದಿದ್ದರು. ಆದರೆ ಹೆಚ್ಚು ರನ್‌ ಬಿಟ್ಟುಕೊಟ್ಟಿದ್ದರು. ಆರ್ಷದೀಪ್ ಸಿಂಗ್ ಕೂಡ ಎರಡು ಓವರ್‌ಗಳಲ್ಲಿ 31 ರನ್‌ ಕೊಟ್ಟು ದುಬಾರಿಯಾಗಿದ್ದರು. ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜ ಮತ್ತು ಕುಲದೀಪ್ ಯಾದವ್ ಕೂಡ ರನ್‌ಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿರಲಿಲ್ಲ. ದಕ್ಷಿಣ ಆಫ್ರಿಕಾದ ಬಲಾಢ್ಯ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಲು ಬೌಲರ್‌ಗಳು ತಮ್ಮ ಸಾಮರ್ಥ್ಯ ಮೀರಿ ಆಡುವ ಅನಿವಾರ್ಯತೆ ಇದೆ. ರೀಜಾ ಹೆನ್ರಿಕ್ಸ್, ಮರ್ಕರಂ, ಟ್ರಿಸ್ಟನ್ ಸ್ಟಬ್ಸ್, ಹೆನ್ರಿಚ್ ಕ್ಲಾಸನ್, ಡೇವಿಡ್ ಮಿಲ್ಲರ್ ಮತ್ತು ಮ್ಯಾಥ್ಯೂ ಬ್ರೀಜ್ ಅವರು ರನ್‌ಗಳ ಹೊಳೆ ಹರಿಸುವ ಸಮರ್ಥರು. ಆತಿಥೇಯರ ಬೌಲಿಂಗ್ ಕೂಡ ಉತ್ತಮವಾಗಿದೆ. ಎರಡನೇ ಪಂದ್ಯದಲ್ಲಿ 4 ಓವರ್‌ಗಳಲ್ಲಿ 18 ರನ್ ಕೊಟ್ಟು ಒಂದು ವಿಕೆಟ್ ಗಳಿಸಿ್ದ ತಬ್ರೇಜ್ ಶಂಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಗೆರಾಲ್ಡ್ ಕೋಜಿ, ಮಾರ್ಕೊ ಯಾನ್ಸೆನ್ ಅವರು ಆರಂಭಿಕ ಹಂತದಲ್ಲಿಯೇ ವಿಕೆಟ್ ಕಿತ್ತು ವಿಜೃಂಭಿಸಬಲ್ಲರು. ಇವರಿಂದಾಗಿ ಭಾರತದ ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಅವರಿಬ್ಬರೂ ಕಳೆದ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದರು. ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್ ಅವರು ಗಳಿಸಿದ್ದ ಅಬ್ಬರದ ಅರ್ಧಶತಕಗಳ ಬಲದಿಂದ ತಂಡವು ಹೋರಾಟದ ಮೊತ್ತ ಗಳಿಸಲು ಸಾಧ್ಯವಾಗಿತ್ತು. ತಿಲಕ್ ವರ್ಮಾ ಕೂಡ ಉಪಯುಕ್ತ ಕಾಣಿಕೆ ನೀಡಿದ್ದರು. ಇಲ್ಲಿಯ ಕ್ರೀಡಾಂಗಣದಲ್ಲಿ ಭಾರತವು ಈ ಹಿಂದೆ ನಾಲ್ಕು ಪಂದ್ಯಗಳನ್ನು ಆಡಿದೆ. 3–1ರ ಗೆಲುವಿನ ದಾಖಲೆ ಹೊಂದಿದೆ. ಅದೇ ಲಯವನ್ನು ಈ ಪಂದ್ಯದಲ್ಲಿಯೂ ಮುಂದುವರಿಸುವ ಹುಮ್ಮಸ್ಸಿನಲ್ಲಿದೆ. ಪಂದ್ಯ ಆರಂಭ: ರಾತ್ರಿ 8.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ಸ್ಟಾರ್ ಆ್ಯಪ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.