ಆರ್ಷದೀಪ್‌ ಬಿರುಗಾಳಿಗೆ ಉರುಳಿದ ದಕ್ಷಿಣ ಆಫ್ರಿಕಾ: ಭಾರತಕ್ಕೆ 8 ವಿಕೆಟ್‌ಗಳ ಜಯ ಜೋಹಾನ್ಸ್‌ಬರ್ಗ್: ಐದು ವಿಕೆಟ್ ಗೊಂಚಲು ಗಳಿಸಿದ ಎಡಗೈ ವೇಗಿ ಆರ್ಷದೀಪ್ ಸಿಂಗ್ ಅವರ ದಾಳಿಯ ಮುಂದೆ ದಕ್ಷಿಣ ಆಫ್ರಿಕಾ ತಂಡವು ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಹೀನಾಯವಾಗಿ ಸೋತಿತು. ಭಾನುವಾರ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡವು 8 ವಿಕೆಟ್‌ಗಳಿಂದ ಜಯಭೇರಿ ಬಾರಿಸಿತು. ಇನಿಂಗ್ಸ್‌ನಲ್ಲಿ ಇನ್ನೂ 200 ಎಸೆತಗಳು ಬಾಕಿ ಇದ್ದವು. ಮೂರು ಪಂದ್ಯಗಳ ಸರಣಿಯಲ್ಲಿ ಕೆ.ಎಲ್. ರಾಹುಲ್ ಬಳಗವು 1–0 ಮುನ್ನಡೆ ಸಾಧಿಸಿತು. ಆರ್ಷದೀಪ್ (37ಕ್ಕೆ5) ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಐದು ವಿಕೆಟ್ ಗಳಿಸಿದ ಭಾರತದ ಮೊದಲ ವೇಗದ ಬೌಲರ್ ಆದರು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆತಿಥೇಯ ತಂಡವು 27.3 ಓವರ್‌ಗಳಲ್ಲಿ 116 ರನ್‌ ಗಳಿಸಿತು. ಪದಾರ್ಪಣೆ ಪಂದ್ಯದಲ್ಲಿ ಅರ್ಧಶತಕ ಹೊಡೆದ ಸಾಯಿ ಸುದರ್ಶನ್ (ಔಟಾಗದೆ 55, 43ಎ, 4X9) ಮತ್ತು ಶ್ರೇಯಸ್ ಅಯ್ಯರ್ (52; 45ಎ, 4X6, 6X1) ಅವರಿಬ್ಬರ ವೇಗದ ಬ್ಯಾಟಿಂಗ್‌ನಿಂದಾಗಿ ಭಾರತ 16.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 117 ರನ್‌ ಪೇರಿಸಿ ಗೆದ್ದಿತು. ಆರ್ಷದೀಪ್ ಸಿಂಗ್ ತಮ್ಮ ಮೊದಲ ಸ್ಪೆಲ್‌ನಲ್ಲಿಯೇ ಆತಿಥೇಯ ತಂಡದ ಪ್ರಮುಖ ಬ್ಯಾಟರ್‌ಗಳಿಗೆ ಪೆವಿಲಿಯನ್ ದಾರಿ ತೋರಿಸಿದರು. ಇನಿಂಗ್ಸ್‌ನ ಎರಡನೇ ಓವರ್‌ ಹಾಕಿದ ಅವರು ರೀಜಾ ಹೆನ್ರಿಕ್ಸ್ ಮತ್ತು ವ್ಯಾನ್ ಡೆರ್ ಡಸೆ ವಿಕೆಟ್‌ಗಳನ್ನು ಕಬಳಿಸಿದರು. ಇನಿಂಗ್ಸ್‌ನ ಎಂಟನೇ ಓವರ್‌ನಲ್ಲಿ ಟೋನಿ ಡಿ ಝಾರ್ಜಿ (28ರನ್) ಮತ್ತು ಹತ್ತನೇ ಓವರ್‌ನಲ್ಲಿ ಕ್ಲಾಸನ್ (6 ರನ್) ಅವರ ವಿಕೆಟ್‌ಗಳನ್ನೂ ತಮ್ಮ ಬುಟ್ಟಿಗೆ ಹಾಕಿಕೊಂಡ ಆರ್ಷದೀಪ್ ಮೆರೆದಾಡಿದರು. ಇನ್ನೊಂದು ಬದಿಯಿಂದ ಆವೇಶ್ ಖಾನ್(27ಕ್ಕೆ4) ಕೂಡ ಚುರುಕಾದ ದಾಳಿ ನಡೆಸಿ ಬ್ಯಾಟರ್‌ಗಳೂ ಕ್ರೀಸ್‌ನಲ್ಲಿ ನಿಲ್ಲದಂತೆ ನೋಡಿಕೊಂಡರು. ಇದರಿಂದಾಗಿ ತಂಡವು 73 ರನ್‌ಗಳಿಗೆ ಎಂಟು ವಿಕೆಟ್ ಕಳೆದುಕೊಂಡಿತು. ಆದರೆ ಆ್ಯಂಡಿಲೆ ಪಿಶುವಾಯೊ (33; 49ಎ, 4X3,6X2) ಒಂದಿಷ್ಟು ಬೀಸಾಟವಾಡಿದ್ದರಿಂದ ತಂಡವು ನೂರರ ಗಡಿ ದಾಟಿತು. ಎರಡನೇ ಸ್ಪೆಲ್ ಬೌಲಿಂಗ್ ಮಾಡಿದ ಆರ್ಷದೀಪ್ ಆ್ಯಂಡಿಲೆ ಆಟಕ್ಕೂ ಕಡಿವಾಣ ಹಾಕಿದರು. ಆರ್ಷದೀಪ್ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಆ್ಯಂಡಿಲೆ ವಿಕೆಟ್ ಒಪ್ಪಿಸಿದರು. ಕೊನೆಯ ಬ್ಯಾಟರ್ ತಬ್ರೇಜ್ ಶಂಸಿ ಎರಡು ಬೌಂಡರಿಗಳು ಇದ್ದ 11 ರನ್‌ ಗಳಿಸಿದರು. ಸಾಯಿ ಸುದರ್ಶನ್ ಅರ್ಧಶತಕ: ಚೆನ್ನೈ ಬ್ಯಾಟರ್ ಸಾಯಿ ಸುದರ್ಶನ್ ಚೆಂದದ ಬ್ಯಾಟಿಂಗ್ ಮಾಡಿದರು. ಬ್ಯಾಕ್‌ಫುಟ್ ಡ್ರೈವ್ ಮತ್ತು ಸ್ಪಿನ್ ಎಸೆತಗಳಿಗೆ ಮುಂದಡಿ ಇಟ್ಟು ಪ್ರಯೋಗಿಸಿದ ವಿಶ್ವಾಸಭರಿತ ಬ್ಯಾಟಿಂಗ್ ಕಣ್ಮನ ಸೆಳೆಯಿತು. ಪದಾರ್ಪಣೆ ಪಂದ್ಯದಲ್ಲಿ ಅರ್ಧಶತಕ ಹೊಡೆದ ಭಾರತದ 17ನೇ ಆಟಗಾರನೆಂಬ ಹೆಗ್ಗಳಿಕೆ ಅವರದ್ದಾಯಿತು. ಸ್ತನ ಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸಲು ದಕ್ಷಿಣ ಆಫ್ರಿಕಾ ತಂಡದ ಆಟಗಾರರು ಗುಲಾಬಿ ರಂಗಿನ ಪೋಷಾಕು ಧರಿಸಿ ಪಂದ್ಯ ಆಡಿದರು. ‘ಸ್ತನ ಕ್ಯಾನ್ಸರ್‌ ಪಿಡುಗು ಹೆಚ್ಚುತ್ತಿದ್ದು. ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಇಂತಹದೊಂದು ಅಭಿಯಾನಕ್ಕೆ ನಮ್ಮ ತಂಡವು ಕೈಜೋಡಿಸಿರುವುದು ಹೆಮ್ಮೆಯ ವಿಷಯ’ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಸಿಇಒ ಪೊಲೆಟ್ಸಿ ಮೊಸೆಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭಾರತ ತಂಡದ ಬ್ಯಾಟರ್ ಸಾಯಿ ಸುದರ್ಶನ್ ಕೈಯಿಂದ ಜಾರಿದ ಬ್ಯಾಟ್‌ 1ST . 8 () ://./ # ಮಾರಕ ದಾಳಿ ನಡೆಸಿದ ಅರ್ಷದೀಪ್ ಸಿಂಗ್ 5 ಹಾಗೂ ಆವೇಶ್ ಖಾನ್ 4, ಕುಲದೀಪ್‌ ಯಾದವ್‌ 1 ವಿಕೆಟ್‌ ಪಡೆದರು. ಆಫ್ರಿಕಾದ ಮೂವರು ಬ್ಯಾಟ್ಸ್‌ಮನ್‌ಗಳಾದ ರೀಜಾ ಹೆನ್ರಿಕ್ಸ್, ರಸಿ ವ್ಯಾನ್ ಡೆರ್ ಡಸೆ, ವಿಯಾನ್ ಮುಲ್ಡರ್ ಸೊನ್ನೆ ಸುತ್ತಿದರು. ಟೋನಿ ಝೋರ್ಡ್‌, ಆ್ಯಂಡಿಲೆ ಪಿಶುವಾಯೊ ಅವರನ್ನು ಹೊರತುಪಡಿಸಿದರೆ ಉಳಿದ ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲರ್‌ಗಳ ದಾಳಿಯನ್ನು ಎದುರಿಸಲಾಗದೇ ವಿಕೆಟ್‌ ಒಪ್ಪಿಸಿದರು. ಟೋನಿ ಡಿ ಝಾರ್ಜಿ 28, ಆ್ಯಂಡಿಲೆ ಪಿಶುವಾಯೊ 33, ಏಡನ್ ಮರ್ಕರಂ 12 ರನ್‌ಗಳಿಸಿದರು. ಭಾರತದ ಪರ ಸಾಯಿ ಸುದರ್ಶನ್ ಅಜೇಯ 55ರನ್‌ ಬಾರಿಸಿದರು. ಶ್ರೇಯಸ್ ಅಯ್ಯರ್ 52 ರನ್‌ಗಳಿಸಿ ಔಟಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.