: ಅರ್ಷದೀಪ್, ಆವೇಶ್ ಖಾನ್ ಮಾರಕ ದಾಳಿಗೆ ಪತರಗುಟ್ಟಿದ ದಕ್ಷಿಣ ಆಫ್ರಿಕಾ ಜೋಹಾನ್ಸ್‌ಬರ್ಗ್: ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಭಾರತದ ಅರ್ಷದೀಪ್ ಸಿಂಗ್ ಹಾಗೂ ಆವೇಶ್ ಖಾನ್ ಮಾರಕ ದಾಳಿಗೆ ದಕ್ಷಿಣ ಆಫ್ರಿಕಾ ತತ್ತರಿಸಿದೆ. ಕೇವಲ 16 ಓವರ್‌ಗಳಲ್ಲಿ ಪ್ರಮುಖ 8 ವಿಕೆಟ್‌ಗಳನ್ನು ಕಳೆದುಕೊಂಡು ದಕ್ಷಿಣ ಆಫ್ರಿಕಾ ಸಂಕಷ್ಟಕ್ಕೆ ಸಿಲುಕಿದೆ. ಅರ್ಷದೀಪ್ ಸಿಂಗ್ ಹಾಗೂ ಆವೇಶ್ ಖಾನ್ ತಲಾ 4 ವಿಕೆಟ್‌ ಪಡೆದರು. ಮೂವರು ಬ್ಯಾಟ್ಸ್‌ಮನ್‌ಗಳಾದ ರೀಜಾ ಹೆನ್ರಿಕ್ಸ್, ರಸಿ ವ್ಯಾನ್ ಡೆರ್ ಡಸೆ, ವಿಯಾನ್ ಮುಲ್ಡರ್ ಸೊನ್ನೆ ಸುತ್ತಿದರು. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಟೋನಿ ಝೋರ್ಡ್‌ ಅವರನ್ನು ಹೊರತುಪಡಿಸಿದರೆ ಉಳಿದ ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲರ್‌ ದಾಳಿಯನ್ನು ಎದುರಿಸಲಾಗದೇ ವಿಕೆಟ್‌ ಒಪ್ಪಿಸಿದರು. ಟೋನಿ ಡಿ ಝಾರ್ಜಿ 28, ಏಡನ್ ಮರ್ಕರಂ 12 ರನ್‌ಗಳಿಸಿ ತಂಡಕ್ಕೆ ಶಕ್ತಿ ತುಂಬುವ ಪ್ರಯತ್ನ ಮಾಡಿದರಾದರೂ ಅವರ ಯತ್ನ ಫಲ ಕೊಡಲಿಲ್ಲ. ಸದ್ಯ ಆ್ಯಂಡಿಲೆ ಪಿಶುವಾಯೊ, ನಾಂದ್ರೆ ಬರ್ಗರ್ ಕ್ರೀಸ್‌ನಲ್ಲಿದ್ದಾರೆ. ಈ ಪಂದ್ಯವು ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಏಕದಿನ ವಿಶ್ವಕಪ್ ಫೈನಲ್ ಸೋಲಿನ ಬಳಿಕ ಭಾರತ ಆಡುತ್ತಿರುವ ಮೊದಲ ಏಕದಿನ ಪಂದ್ಯ ಇದಾಗಿದೆ. ಕನ್ನಡಿಗ ಕೆ.ಎಲ್. ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಸಾಯಿ ಸುದರ್ಶನ್ ಪದಾರ್ಪಣೆ... ಭಾರತದ ಪರ ಸಾಯಿ ಸುದರ್ಶನ್ ಚೊಚ್ಚಲ ಪಂದ್ಯವನ್ನು ಆಡಲಿದ್ದಾರೆ. ಮತ್ತೊಂದೆಡೆ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ದಕ್ಷಿಣ ಆಫ್ರಿಕಾ ಆಟಗಾರರು ಇಂದು ಪಿಂಕ್ ಜೆರ್ಸಿಯಲ್ಲಿ ಕಣಕ್ಕಿಳಿದಿದ್ದಾರೆ. ಏಕದಿನ ಸರಣಿಗೂ ಮುನ್ನ ನಡೆದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿ 1-1ರ ಅಂತರದಲ್ಲಿ ಸಮಬಲಗೊಂಡಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.